×
Ad

ಆಧಾರ್ ಜೋಡಣೆಗೆ ಜೂ.30ರ ವರೆಗೆ ಅವಧಿ ವಿಸ್ತರಣೆ: : ಆಹಾರ ಸಚಿವ ದಿನೇಶ್ ಗುಂಡೂರಾವ್

Update: 2016-06-13 19:59 IST

ಬೆಂಗಳೂರು, ಜೂ. 13: ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆಗೆ ಜೂ.30ರ ವರೆಗೆ ಅವಧಿ ವಿಸ್ತರಿಸಲಾಗಿದೆ. ಈ ಅವಧಿಯೊಳಗೆ ಆಧಾರ್ ಸಂಖ್ಯೆ ಜೋಡಣೆ ಮಾಡದಿದ್ದರೆ ಆಹಾರ ಧಾನ್ಯಗಳನ್ನು ಸ್ಥಗಿತಗೊಳಿಸಲಾಗುವುದೆಂದು ಆಹಾರ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿನ ತಮ್ಮ ಕೊಠಡಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಡಿತರ ಚೀಟಿಗೆ ಆಧಾರ್ ಜೋಡಣೆಗೆ ಜೂ.15ರ ಗಡುವು ನೀಡಲಾಗಿತ್ತು. ಇದೀಗ ಆ ಅವಧಿಯನ್ನು ಜೂ.30ರ ವರೆಗೂ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ.75ರಷ್ಟು ದೃಢೀಕೃ: ಈಗಾಗಲೇ ಶೇ.87ರಷು ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಿಕೊಂಡಿದ್ದು, ಆ ಪೈಕಿ ಶೇ.72ರಷ್ಟು ದೃಢೀಕರಣಗೊಂಡಿದೆ. ಈ ತಿಂಗಳ ಅಂತ್ಯಕ್ಕೆ ಜೋಡಣೆ ಕಾರ್ಯ ಶೇ.90ರಷ್ಟಾಗಲಿದೆ. ಒಂದು ತಿಂಗಳಲ್ಲಿ ಶೇ.100ರಷ್ಟು ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.
ಬಹುಮಾನ: ನಕಲಿ, ಬೇನಾಮಿ, ಅನರ್ಹ ಪಡಿತರ ಚೀಟಿದಾರರ ಬಗ್ಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ 1 ಪಡಿತರ ಚೀಟಿ ಪತ್ತೆಗೆ 400ರೂ. ಬಹುಮಾನ ನೀಡಲಾಗುವುದು ಎಂದ ಅವರು, ನ್ಯಾಯಬೆಲೆ ಅಂಗಡಿಗೆ ಪೂರೈಕೆ ಆಗುವ ಆಹಾರ ಧಾನ್ಯಗಳ ಅಕ್ರಮಗಳ ಬಗ್ಗೆ ಮಾಹಿತಿದಾರರರಿಗೆ ವಶಪಡಿಸಿಕೊಂಡ ಪಡಿತರಗಳ ಒಟ್ಟು ವೌಲ್ಯದ ಶೇ.5ರಷ್ಟು ಮೊತ್ತವನ್ನು ಬಹುಮಾನ ರೂಪದಲ್ಲಿ ನೀಡಲಾಗುವುದು ಎಂದರು.
ಅನರ್ಹ ಫಲಾನುಭವಿಗಳು ಹಾಗೂ ಪಡಿತರ ಧಾನ್ಯಗಳ ಅಕ್ರಮ ದಾಸ್ತಾನುದಾರರ ಮಾಹಿತಿ ನೀಡುವ ಸಾರ್ವಜನಿಕರಿಗೆ ವಿವರಗಳನ್ನು ಗುಪ್ತವಾಗಿರಿಸಲಾಗುವುದು ಎಂದ ಅವರು, ಮಾಹಿತಿದಾರರಿಗೆ ಆನ್‌ಲೈನ್ ಮೂಲಕ ಬಹುಮಾನ ನೀಡಲಾಗುವುದು ಎಂದರು.
ಅಕ್ರಮ ತಡೆಗೆ ಜಾಗೃತ ದ: ನ್ಯಾಯಬೆಲೆ ಅಂಗಡಿಗಳ ವ್ಯಾಪ್ತಿಯಲ್ಲಿ ಅಕ್ರಮ ತಡೆಗೆ ಮೂರು ಪಡಿತರ ಚೀಟಿದಾರರ ನೇತೃತ್ವದಲ್ಲಿ ಜಾಗೃತ ದಳ ರಚಿಸಲು ತೀರ್ಮಾನಿಸಲಾಗಿದೆ ಎಂದ ಅವರು, ಆಹಾರ ಪದಾರ್ಥಗಳ ಗುಣಮಟ್ಟ ಹಾಗೂ ಅಕ್ರಮ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯ ಆಹಾರ ಆಯೋಗ ರಚೆ: ‘ಆಹಾರ ಭದ್ರತಾ ಕಾಯ್ದೆ’ಯನ್ವಯ ‘ರಾಜ್ಯ ಆಹಾರ ಆಯೋಗ ರಚನೆ’ಗೆ ಕ್ರಮ ಕೈಗೊಳ್ಳಲಾಗಿದೆ. ಪಡಿತರ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಆಯೋಗ ಸಹಕಾರಿಯಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ಪೂರ್ಣ ಪ್ರಮಾಣದಲ್ಲಿ ಆಯೋಗ ಅಸ್ತಿತ್ವಕ್ಕೆ ಬರುವ ವರೆಗೂ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ಆ ಅಧಿಕಾರವನ್ನು ನೀಡಲು ತೀರ್ಮಾನಿಸಲಾಗಿದೆ ಎಂದ ಅವರು, ಪಡಿತರ ಚೀಟಿದಾರರಿಗೆ ನೀಡುವ ಆಹಾರ ಪದಾರ್ಥಗಳ ಗುಣಮಟ್ಟ ಸೇರಿದಂತೆ ಇನ್ನಿತರ ಲೋಪದೋಷಗಳ ಬಗ್ಗೆ ದೂರು ನೀಡಲು ಅವಕಾಶವಿದೆ ಎಂದರು.
ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳು, ಬಿಸಿಯೂಟ ಯೋಜನೆಯನ್ನು ಆಹಾರ ಆಯೋಗದ ವ್ಯಾಪ್ತಿಗೆ ತರಲಾಗುವುದು ಎಂದ ಅವರು, ಈ ಆಯೋಗಕ್ಕೆ ಸ್ವಯಂಪ್ರೇರಿತ ತನಿಖೆ ಹಾಗೂ ಸರಕಾರಕ್ಕೆ ಶಿಫಾರಸು ಮಾಡುವ ಅಧಿಕಾರವಿದೆ ಎಂದು ಹೇಳಿದರು.

‘ಸಾರ್ವಜನಿಕರು ಎಪಿಎಲ್ ಪಡಿತರ ಚೀಟಿಯನ್ನು ಆಧಾರ್ ಸಂಖ್ಯೆಯೊಂದಿಗೆ ಆನ್‌ಲೈನ್ ಮೂಲಕವೆ ತಾವು ಕುಳಿತಲ್ಲೇ ಪಡೆದುಕೊಳ್ಳಲು ಅನುಕೂಲವಾಗುವಂತೆ ನಿಯಮಗಳನ್ನು ಸರಳೀಕರಣಕ್ಕೆ ಉದ್ದೇಶಿಸಿದ್ದು ಒಂದೆರಡು ತಿಂಗಳಲ್ಲಿ ನೂತನ ವ್ಯವಸ್ಥೆ ಜಾರಿಗೆ ಬರಲಿದೆ’
-ದಿನೇಶ್ ಗುಂಡೂರಾವ್ ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News