ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣ : ಪ್ರಮುಖ ಆರೋಪಿ ಡ್ಯಾನಿಯಲ್ ಪ್ರಕಾಶ ಬಂಧನ
ಬೆಂಗಳೂರು, ಜೂ. 13: 2013ರ ಎಪ್ರಿಲ್ 17ರಂದು ಇಲ್ಲಿನ ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು ಪ್ರಮುಖ ಆರೋಪಿ ಡ್ಯಾನಿಯಲ್ ಪ್ರಕಾಶ್ ಯಾನೆ ಪ್ರಕಾಶ್ ಎಂಬವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣ ಸಂಬಂಧ ಈವರೆಗೂ 15 ಮಂದಿ ಆರೋಪಿಗಳನ್ನು ಬಂಧಿಸಿದ್ದು, ವಿವಿಧ ಕಾರಾಗೃಹಗಳಲ್ಲಿ ಇರಿಸಲಾಗಿದೆ. ಪ್ರಮುಖ ಆರೋಪಿಯನ್ನು ತಮಿಳುನಾಡಿನ ತಿರುನಲ್ವೇಲಿಯಿಂದ ವಶಕ್ಕೆ ಪಡೆದಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.
ಪ್ರಮುಖ ಆರೋಪಿ ಡ್ಯಾನಿಯಲ್ ಪ್ರಕಾಶ್ ತಿರುನಲ್ವೇಲಿಯ ಪುದುಕೋಡಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನಾಗಿದ್ದು, ಕೊಯಮತ್ತೂರು ಹಾಗೂ ತಿರುನಲ್ವೀಲಿಯ ಸ್ಫೋಟ ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಕಾರಾಗೃಹ ಶಿಕ್ಷೆಯನ್ನೂ ಅನುಭವಿಸಿದ್ದಾನೆ ಎಂದು ಪೊಲೀಸ್ ಇಲಾಖೆ ಮೂಲಗಳಿಂದ ಗೊತ್ತಾಗಿದೆ.
ಬಂಧಿತ ಪ್ರಮುಖ ಆರೋಪಿ ಡ್ಯಾನಿಯಲ್ ಪ್ರಕಾಶ್ ಯಾನೆ ಪ್ರಕಾಶ್ ಮಲ್ಲೇಶ್ವರಂ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸ್ಫೋಟಕಗಳನ್ನು ಪೂರೈಕೆ ಮಾಡಿದ ಆರೋಪಿಯಾಗಿದ್ದಾನೆ. ದೇಶದ ವಿವಿಧೆಡೆಗಳಲ್ಲಿನ ಸ್ಫೋಟ ಪ್ರಕರಣಗಳಿಗೆ ಸ್ಫೋಟಕ ಪೂರೈಕೆ ಮಾಡಿದ್ದಾನೆಂಬ ಆರೋಪವೂ ಆತನ ಮೇಲಿದೆ ಎಂದು ಹೇಳಲಾಗಿದೆ.
2013ರ ಎಪ್ರಿಲ್ 17ರ ಬೆಳಗ್ಗೆ 10:20ರ ಸುಮಾರಿಗೆ ವೈಯಾಲಿಕಾವಲ್ ಪೊಲೀಸ್ ಠಾಣಾ ಸರಹದ್ದಿನ ಮಲ್ಲೇಶ್ವರಂ ಬಿಜೆಪಿ ಕೇಂದ್ರ ಕಚೇರಿ ಸಮೀಪ ದ್ವಿಚಕ್ರ ವಾಹನದಲ್ಲಿ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ನಾಲ್ವರು ವಿದ್ಯಾರ್ಥಿನಿಯರು, 11 ಮಂದಿ ಪೊಲೀಸರು ಸೇರಿದಂತೆ 16 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಆ ಪೈಕಿ ಓರ್ವ ವಿದ್ಯಾರ್ಥಿನಿ ತನ್ನ ಕಾಲನ್ನು ಕಳೆದುಕೊಂಡಿದ್ದಳು.
ಈ ಪ್ರಕರಣದ ತನಿಖೆಯನ್ನು ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ ಕೆ.ವಿ.ಶರತ್‌ಚಂದ್ರ, ಉಪ ಪೊಲೀಸ್ ಆಯುಕ್ತ ಎಚ್.ಡಿ.ಆನಂದ್‌ಕುಮಾರ್ ಮಾರ್ಗದರ್ಶನದಲ್ಲಿ, ಸಿಸಿಬಿ ವಿಶೇಷ ತನಿಖಾ ದಳದ ಎಸಿಪಿ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಲಾಗಿದೆ.