ಬೆಂಗಳೂರು-ಮಂಗಳೂರು ಜೆಟ್ ಏರ್‌ವೇಸ್ ವಿಮಾನದಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರು, ಜೂ.15: ಬೆಂಗಳೂರಿನಿಂದ ಮಂಗಳೂರಿಗೆ ಹೊರಟಿದ್ದ ಜೆಟ್ ಏರ್‌ವೇಸ್ ವಿಮಾನದ ಕ್ಯಾಬಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಪರಿಣಾಮ ವಿಮಾನವನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ಬೆಳಗ್ಗೆ 10 ಗಂಟೆಗೆ 9 ಡಬ್ಲು 2939 ಸಂಖ್ಯೆಯ ಜೆಟ್ ಏರ್‌ವೇಸ್ ಹಾರಾಟ ಆರಂಭಿಸಿದ 15 ನಿಮಿಷದಲ್ಲಿ ವಿಮಾನದ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ಎಂಜಿನ್‌ನಲ್ಲಿ ಬೆಂಕಿ ತಗಲಿಕೊಂಡಿತು. ತಕ್ಷಣವೇ ವಿಮಾನವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಇಳಿಸಲಾಯಿತು ಎಂದು ಜೆಟ್ ಏರ್‌ವೇಸ್ ಹೇಳಿದೆ.
ವಿಮಾನ ಇಳಿದ ತಕ್ಷಣವೇ ಧಾವಿಸಿ ಬಂದ ವಿಮಾನದ ರಕ್ಷಣಾ ಪಡೆ ಹಾಗೂ ಅಗ್ನಿ ಶಾಮಕದ ದಳ ವಿಮಾನದಲ್ಲಿದ್ದ 65 ಪ್ರಯಾಣಿಕರು ಹಾಗೂ ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಕೆಳಗಿಳಿಸಿದರು. ಅದೃಷ್ಟವಶಾತ್ ಘಟನೆಯಿಂದ ಯಾರಿಗೂ ಗಂಭೀರ ಗಾಯವಾಗಿಲ್ಲ. ನಾಲ್ವರು ಪ್ರಯಾಣಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ ಎಂದು ಏರ್‌ಲೈನ್ಸ್ ಪ್ರಕಟನೆಯಲ್ಲಿ ತಿಳಿಸಿದೆ.
ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಲ್ಲಿ ರನ್‌ವೇಯಲ್ಲಿ ಎಲ್ಲ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದವರನ್ನು ನಿಯೋಜಿಸಲಾಗಿತ್ತು. ಬೆಂಗಳೂರಿನ ಏರ್‌ಪೋರ್ಟ್‌ನ ರನ್‌ವೇ ಅನ್ನು ಮುಚ್ಚಲಾಗಿದ್ದು, ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಪ್ರತ್ಯಕ್ಷದರ್ಶಿಯ ಅನುಭವ:
‘‘ವಿಮಾನ ಹಾರಾಟ ಆರಂಭಿಸಿ 10 ನಿಮಿಷ ಕಳೆಯುವಷ್ಟರಲ್ಲಿ ಕ್ಯಾಬಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿತ್ತು. ವಿಮಾನದ ಸಿಬ್ಬಂದಿ ಮುಖ ಮುಚ್ಚಿಕೊಂಡು ಉಸಿರಾಡಲು ಎಲ್ಲ ಪ್ರಯಾಣಿಕರಿಗೆ ಕರವಸ್ತ್ರ ನೀಡಿದರು. ಆದರೆ, ಹೊಗೆ ಮತ್ತಷ್ಟು ಹೆಚ್ಚಾಯಿತು...ನಾನು ವಿಮಾನದ ಒಂದು ಎಂಜಿನ್ ಪಕ್ಕದಲ್ಲೇ ಕುಳಿತ್ತಿದ್ದೆ. ಅಲ್ಲಿ ಹೊಗೆಯಾಡುವುದನ್ನು ಗಮನಿಸಿದೆ. ತಕ್ಷಣವೇ ಗಗನಸಖಿಯರನ್ನು ಎಚ್ಚರಿಸಿದೆ. ಅವರು ಪೈಲಟ್‌ನ್ನು ಎಚ್ಚರಿಸಿದರು. ಪೈಲಟ್ ಹೊಗೆ ಕಾಣಿಸಿಕೊಂಡ ಎಂಜಿನ್‌ನ್ನು ಆಫ್ ಮಾಡಿದರು. ಕೇವಲ ಒಂದೇ ಎಂಜಿನ್‌ನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲು ನಿರ್ಧರಿಸಿದರು. ನಾವೆಲ್ಲರೂ ಸುರಕ್ಷಿತವಾಗಿ ವಿಮಾನದಿಂದ ಹೊರ ಬಂದಿರುವುದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಂಗಳೂರಿನ ಕೆನರಾ ಲೈಟಿಂಗ್ಸ್‌ನ ಆಡಳಿತ ನಿರ್ದೇಶಕ ಅಜೀತ್ ಖರೆ ಹೇಳಿದ್ದಾರೆ.