ಉಗ್ರ ಚಟುವಟಿಕೆ ಕಂಡರೆ ಮುಸ್ಲಿಮರು ನಮಗೆ ತಿಳಿಸುತ್ತಾರೆ

Update: 2016-06-17 03:12 GMT

ವಾಷಿಂಗ್ಟನ್, ಜೂ.17: ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು ಮುಸ್ಲಿಂ ಭಯೋತ್ಪಾದನೆ ವಿರುದ್ಧ ಮಾಡಿರುವ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿರುವ ಕಾನೂನು ಜಾರಿ ವಿಭಾಗದ ಅಧಿಕಾರಿಗಳು, ತಮ್ಮ ಸಹವರ್ತಿಗಳು ಭಯೋತ್ಪಾದಕರಾಗಿ ಬದಲಾಗುತ್ತಿದ್ದಾರೆ ಎಂಬ ಬಗ್ಗೆ ಅಮೆರಿಕನ್ ಮುಸ್ಲಿಮರು ಪದೇ ಪದೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಎಂಬ ಅಂಶವನ್ನು ಬಹಿರಂಗಪಡಿಸಿದೆ.

ಮುಸ್ಲಿಮರು ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎಂದು ಟ್ರಂಪ್, ಸಿಎನ್‌ಎನ್‌ಗೆ ಸೋಮವಾರ ನೀಡಿದ ಸಂದರ್ಶನದಲ್ಲಿ ಆಪಾದಿಸಿದ್ದರು. ಅಮೆರಿಕನ್ ಮುಸ್ಲಿಂ ಪ್ರಜೆಯೊಬ್ಬ ಒರ್ಲಾಂಡೊ ನೈಟ್‌ಕ್ಲಬ್ ಮೇಲೆ ದಾಳಿ ಮಾಡಿ 49 ಮಂದಿಯನ್ನು ಹತ್ಯೆ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ಟ್ರಂಪ್, ಕೆಲ ನಿರ್ದಿಷ್ಟ ಕಾರಣಗಳಿಗಾಗಿ ಮುಸ್ಲಿಂ ಸಮುದಾಯ ಇಂಥ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿರಲಿಲ್ಲ ಎಂದು ಹೇಳಿದ್ದರು.

ಆದರೆ ಎಫ್‌ಬಿಐ ನಿರ್ದೇಶಕ ಜೇಮ್ಸ್ ಕೊಮೆ ಅವರು, ತಮ್ಮ ಸಮುದಾಯದ ಜನರು ನಂಬಿಕೆ ಹೆಸರಿನಲ್ಲಿ ಹಿಂಸಾಕೃತ್ಯ ನಡೆಸುವುದನ್ನು ಅವರು ಇಷ್ಟಪಡುವುದಿಲ್ಲ. ಆದ್ದರಿಂದ ನಮ್ಮ ಜೊತೆ ಫಲಪ್ರದ ಸಂಬಂಧ ಹೊಂದಿರುವ ಕೆಲ ಮಂದಿ ಈ ಮಾಹಿತಿಯನ್ನು ನೀಡುತ್ತಿದ್ದರು. ಅವರು ಮುಸ್ಲಿಮರು ಎಂದು ಸ್ಪಷ್ಟಪಡಿಸಿದ್ದಾರೆ. ಇದು ಮುಸ್ಲಿಂ ಸಮುದಾಯದ ಜೊತೆ ಎಫ್‌ಬಿಐ ನಿಕಟ ಸಂಬಂಧ ಹೊಂದಿರಲು ಕಾರಣ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಷನ್‌ನ ವಾಷಿಂಗ್ಟನ್ ಕ್ಷೇತ್ರ ಕಚೇರಿಯ ವಕ್ತಾರ ಆಂಡ್ರೂ ಏಮ್ಸ್ ಹೇಳಿಕೆ ನೀಡಿ, ಏಜೆನ್ಸಿ ಸ್ಥಳೀಯ ಮುಸ್ಲಿಮರ ಜೊತೆ ಉತ್ತಮ ಸಂಬಂಧ ಹೊಂದಿದೆ. ಈ ಭಾಗದಲ್ಲಿ ಕೆಲಸ ಮಾಡುವ ಎಫ್‌ಬಿಐ ಏಜೆಂಟರಿಗೆ ಮುಸ್ಲಿಂ ಸಮುದಾಯದಿಂದ ಕೆಲವರ ಸಂದೇಹಾಸ್ಪದ ಚಟುವಟಿಕೆಗಳ ಬಗ್ಗೆ ಮಾಹಿತಿ ಬರುತ್ತಿತ್ತು ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News