ಭಯದ ನೆರಳಲ್ಲಿ ದಿನ ಕಳೆಯುತ್ತಿರುವ ಅಫ್ಘಾನಿಸ್ತಾನದ ಹಿಂದೂ, ಸಿಖ್ಖರು

Update: 2016-06-23 15:23 GMT

ಕಾಬೂಲ್, ಜೂ. 23: ಕಾಬೂಲ್‌ನಲ್ಲಿ ಇತ್ತೀಚೆಗೆ ಒಂದು ದಿನ ಜಗ್ತಾರ್ ಸಿಂಗ್ ಲಘ್ಮನಿ ತನ್ನ ಸಾಂಪ್ರದಾಯಿಕ ಗಿಡಮೂಲಿಕೆ ಅಂಗಡಿಯಲ್ಲಿದ್ದರು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಚೂರಿ ತೋರಿಸಿ, ಒಂದೋ ಇಸ್ಲಾಮ್‌ಗೆ ಮತಾಂತರಗೊಳ್ಳಬೇಕು, ಇಲ್ಲಿದಿದ್ದರೆ ಕತ್ತು ಸೀಳುವೆ ಎಂಬ ಬೆದರಿಕೆ ಹಾಕಿದನು. ಅಲ್ಲಿ ಸೇರಿದ್ದವರು ಮತ್ತು ಇತರ ಅಂಗಡಿಗಳವರು ಅಂದು ಅವರ ಪ್ರಾಣವನ್ನು ರಕ್ಷಿಸಿದರು.
ಇದು ಅಫ್ಘಾನಿಸ್ತಾನದಲ್ಲಿ ಕ್ಷೀಣಗೊಳ್ಳುತ್ತಿರುವ ಸಿಖ್ ಮತ್ತು ಹಿಂದೂ ಸಮುದಾಯಗಳ ಮೇಲೆ ನಡೆದ ಇತ್ತೀಚಿನ ದಾಳಿಯಾಗಿದೆ.
ಒಂದು ಕಾಲದಲ್ಲಿ ಸಿಖ್ ಮತ್ತು ಹಿಂದೂಗಳು ಅಫ್ಘಾನಿಸ್ತಾನದ ಲವಲವಿಕೆಯ ಅಲ್ಪಸಂಖ್ಯಾತ ಸಮುದಾಯಗಳಾಗಿದ್ದರು. ಈ ಬೆರಳೆಣಿಕೆಯಷ್ಟು ಸಿಖ್ ಮತ್ತು ಹಿಂದೂ ಕುಟುಂಬಗಳು ಮಾತ್ರ ಇಲ್ಲಿ ನೆಲೆಸಿವೆ. ಅಫ್ಘಾನಿಸ್ತಾನದಲ್ಲಿ ತಾರತಮ್ಯ ಮತ್ತು ಅಸಹಿಷ್ಣುತೆ ಹೆಚ್ಚುತ್ತಿದೆ ಎಂಬ ಕಾರಣಕ್ಕಾಗಿ ಹೆಚ್ಚಿನವರು ತಮ್ಮ ಹುಟ್ಟಿದ ದೇಶಕ್ಕೆ ಪಲಾಯನಗೈದಿದ್ದಾರೆ.
‘‘ನಾವು ಇಲ್ಲಿ ಹೆದರಿಕೆ ಮತ್ತು ತಾರತಮ್ಯದೊಂದಿಗೆ ನಮ್ಮ ದಿನವನ್ನು ಆರಂಭಿಸುತ್ತೇವೆ. ನೀವು ಮುಸ್ಲಿಮ್ ಅಲ್ಲದಿದ್ದರೆ, ಅವರ ದೃಷ್ಟಿಯಲ್ಲಿ ನೀವು ಮಾನವರಲ್ಲ’’ ಎಂದು ಕಾಬೂಲ್‌ನ ಗಿಜಿಗಿಡುವ ಮಧ್ಯದಲ್ಲಿರುವ ತನ್ನ ಸಣ್ಣ ಅಂಗಡಿಯಲ್ಲಿ ಜಗ್ತಾರ್ ಸಿಂಗ್ ಹೇಳಿದರು.
‘‘ಏನು ಮಾಡಬೇಕು ಅಥವಾ ಎಲ್ಲಿ ಹೋಗಬೇಕು ಎಂದು ನನಗೆ ತಿಳಿದಿಲ್ಲ’’ ಎಂದು ಅವರು ಹೇಳುತ್ತಾರೆ.
ಅಫ್ಘಾನಿಸ್ತಾನದಲ್ಲಿ ಶತಮಾನಗಳಿಂದ ಹಿಂದೂ ಮತ್ತು ಸಿಖ್ ಸಮುದಾಯಗಳು ವ್ಯಾಪಾರ ಮತ್ತು ಲೇವಾದೇವಿಯಲ್ಲಿ ಮುಂಚೂಣಿಯಲ್ಲಿದ್ದವು. ಆದರೆ, ಇಂದು ಈ ಸಮುದಾಯಗಳು ವೈದ್ಯಕೀಯ ಗಿಡಮೂಲಿಕೆ ಅಂಗಡಿಗಳಿಗಷ್ಟೇ ಸೀಮಿತವಾಗಿವೆ.
ಹಿಂದೂಗಳು ಮತ್ತು ಸಿಖ್ಖರ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಅವತಾರ್ ಸಿಂಗ್ ಹೇಳುವಂತೆ, ಈಗ ಈ ಸಮುದಾಯಗಳ 220ಕ್ಕೂ ಕಡಿಮೆ ಕುಟುಂಬಗಳು ದೇಶದಲ್ಲಿವೆ. 1992ರಲ್ಲಿ ಕಾಬೂಲ್ ಸರಕಾರ ಪತನಗೊಳ್ಳುವ ಮೊದಲು ಸಮುದಾಯದ 2.2 ಲಕ್ಷ ಸದಸ್ಯರಿದ್ದರು.
ಒಂದು ಕಾಲದಲ್ಲಿ ಇಡೀ ದೇಶದಲ್ಲಿ ಹರಡಿಹೋಗಿದ್ದ ಸಮುದಾಯ ಇಂದು ಪೂರ್ವದ ಪ್ರಾಂತಗಳಾದ ನಂಗರ್‌ಹಾರ್ ಮತ್ತು ಘಝ್ನಿ ರಾಜಧಾನಿ ಕಾಬೂಲ್‌ನಲ್ಲಿ ಕೇಂದ್ರೀಕೃತಗೊಂಡಿವೆ.
ಇಲ್ಲಿ ಹಿಂದೂಗಳು ಮತ್ತು ಸಿಖ್ಖರನ್ನು ಸಾರ್ವಜನಿಕವಾಗಿ ಗುರುತಿಸುವಂತಾಗಲು, ಅವರು ಹಳದಿ ಪಟ್ಟಿಗಳನ್ನು ಧರಿಸಬೇಕು.
‘‘ಆ ಒಳ್ಳೆಯ ದಿನಗಳು ಬಹು ಹಿಂದೆಯೇ ಹೋಗಿವೆ. ಆಗ ನಮ್ಮನ್ನು ಅಫ್ಘಾನಿಸ್ತಾನೀಯರಂತೆಯೇ ಪರಿಗಣಿಸಲಾಗುತ್ತಿತ್ತು, ಹೊರಗಿನವರಂತಲ್ಲ’’ ಎಂದು ಅವತಾರ್ ಸಿಂಗ್ ಹೇಳುತ್ತಾರೆ.
‘‘ನಮ್ಮ ಜಮೀನುಗಳನ್ನು ಸರಕಾರದಲ್ಲಿರುವ ಪ್ರಬಲ ವ್ಯಕ್ತಿಗಳು ವಶಪಡಿಸಿಕೊಂಡಿದ್ದಾರೆ. ನಾವು ಬೆದರಿಕೆಗಳನ್ನು ಎದುರಿಸುತ್ತಿದ್ದೇವೆ. ಈ ಸಣ್ಣ ಸಮುದಾಯ ದಿನದಿಂದ ದಿನಕ್ಕೆ ಚಿಕ್ಕದಾಗುತ್ತಾ ಸಾಗುತ್ತಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News