ಯುರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಔಟ್- ಭಾರತದ ಮೇಲಾಗುವ ಪರಿಣಾಮಗಳೇನು ?

Update: 2016-06-24 06:59 GMT

ಲಂಡನ್, ಜೂ.24: ಯುರೋಪಿನ್ ಯೂನಿಯನ್‌ನಿಂದ ಹೊರನಡೆಯುವುದನ್ನು ಬ್ರೆಕ್ಸಿಟ್ ಜನಮತ ಬೆಂಬಲಿಸಿರುವುದು ದೇಶವನ್ನು ಅನಿಶ್ಚಿತ ಹಾದಿ ತುಳಿಯುವಂತೆ ಮಾಡಿದೆಯಲ್ಲದೆ, ಎರಡನೆ ವಿಶ್ವಯುದ್ಧದ ನಂತರ ಯುರೋಪಿನ್ ದೇಶಗಳಲ್ಲಿ ಏಕತೆ ಸಾಧಿಸುವ ತ್ನಕ್ಕೆ ದೊಡ್ಡ ಹೊಡೆತ ನೀಡಿದೆ. ಈ ಬ್ರೆಕ್ಸಿಟ್ ಜನಮತ ವಿಶ್ವದಾದ್ಯಂತ ತನ್ನ ಪರಿಣಾಮ ಬೀರುವುದು ನಿಜವಾದರೂ ಭಾರತದ ಆರ್ಥಿಕತೆಯ ಮೇಲೆ ಅದರ ಪರಿಣಾಮ ಕೂಡ ಹಲವು. ಅವುಗಳಲ್ಲಿ ಕೆಲವು ಇಲ್ಲಿದೆ ಓದಿ.

1. ಮಾರುಕಟ್ಟೆ 

ಬ್ರಿಟನ್ ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸುತ್ತಿದ್ದಂತೆಯೇ ಸೆನ್ಸೆಕ್ಸ್ ಇಂದು 940 ಅಂಕಗಳಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಶುಕ್ರವಾರ ಬೆಳಗ್ಗೆ 281.50 ಅಂಕಗಳಷ್ಟು ಕುಸಿದಿದೆ. ಆದರೆ ಯುರೋಪಿಯನ್ ಯೂನಿಯನ್‌ನಿಂದ ಬ್ರಿಟನ್ ಜನವರಿ 2018ರಲ್ಲಿ ವಾಸ್ತವವಾಗಿ ಹೊರ ಬರುವುದರಿಂದ ಭಾರತದ ಮೇಲೆ ಬ್ರೆಕ್ಸಿಟ್ ತಕ್ಷಣಕ್ಕೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂಬುದು ಷೇರು ದಲ್ಲಾಳಿಗಳ ಅಭಿಮತ.

ಈ ಬೆಳವಣಿಗೆಯ ನಂತರ ವಿಶ್ವ ಮಾರುಕಟ್ಟೆಯಲ್ಲಿ ತೈಲ ಬೆಲೆಗಳ ಕೂಡ ಇಳಿದಿದ್ದು, ಏಷ್ಯದಲ್ಲಿ ಶೇ.6ರಷ್ಟು ಇಳಿಕೆ ಕಂಡಿದೆ.

2. ಕರೆನ್ಸಿ

ಶುಕ್ರವಾರ ಬ್ರಿಟಿಷ್ ಪೌಂಡ್ ಬೆಲೆ ಕಳೆದ 31 ವರ್ಷಗಳಲ್ಲಿಯೇ ತೀವ್ರ ಕುಸಿತ ಕಂಡಿತ್ತು. ರೂಪಾಯಿ ಬೆಲೆ ಕೂಡ ಅಮೆರಿಕನ್ ಡಾಲರ್ ಎದುರು 89 ಪೈಸೆ ಕುಸಿದು 68.17 ಆಗಿದೆ. ಫಾರೆಕ್ಸ್ ಮಾರುಕಟ್ಟೆಯಲ್ಲಿ ಆರ್‌ಬಿಐ ಮಧ್ಯ ಪ್ರವೇಶಿಸಿ ಲಿಕ್ವಿಡಿಟಿ ಬೆಂಬಲ ನೀಡಿದೆ.
ಬ್ರೆಕ್ಸಿಟ್‌ನಿಂದ ಡಾಲರ್‌ಗೆ ಲಾಭವಿದ್ದು ಇದು ರೂಪಾಯಿಯ ಮೌಲ್ಯ ಕುಸಿಯುವಂತೆ ಮಾಡಬಹುದಾದರೂ ಡಾಲರ್ ಮೌಲ್ಯ ಏರಿಕೆಗೆ ಕ್ರಮೇಣ ಕಡಿವಾಣ ಬೀಳಬಹುದು.

3. ವ್ಯಾಪಾರ

 2015-16ರಲ್ಲಿ ಬ್ರಿಟನ್‌ನೊಂದಿಗಿನ ಭಾರತದ ವ್ಯಾಪಾರ 14.02 ಬಿಲಿಯನ್ ಮೌಲ್ಯದ್ದಾಗಿದ್ದರೆ, ಇದರಲ್ಲಿ 8.93 ಬಿಲಿಯನ್ ರಫ್ತು ಹಾಗೂ 5.19 ಬಿಲಿಯನ್ ಆಮದುಗಳಿಂದ ಬಂದಿದೆ. ಆದರೆ ಬ್ರಿಟನ್ ಆರ್ಥಿಕತೆಗೆ ಬ್ರೆಕ್ಸಿಟ್ ಅಡ್ಡ ಪರಿಣಾಮ ಬೀರಿದಲ್ಲಿ ಅದು ಭಾರತ-ಬ್ರಿಟನ್ ವ್ಯಾಪಾರದ ಮೇಲೂ ಪರಿಣಾಮ ಬೀರಬಹುದು.

4. ಬಂಡವಾಳ

ರಿಸ್ಕ್ ಇರುವಂತಹ ಮಾರುಕಟ್ಟೆಗಳಾದ ಭಾರತದಿಂದ ವಿದೇಶಿ ನಿಧಿಗಳು ಹೊರಹೋಗುವ ಸಂಭವವಿದ್ದು ಅವರು ಕಡಿಮೆ ರಿಸ್ಕ್ ಇರುವ ದೇಶಗಳತ್ತ ತಮ್ಮ ಗಮನ ಹರಿಸಬಹುದು.
ಅದೇ ಸಮಯ ಕಡಿಮೆ ರಿಸ್ಕ್ ಇರುವ ಚಿನ್ನದಲ್ಲಿ ಹೂಡಿಕೆ ಹೆಚ್ಚಬಹುದಲ್ಲದೆ ದೇಶೀಯ ಇಕ್ವಿಟಿ ಮಾರುಕಟ್ಟೆಗಳಿಂದ ಹೊರ ಹೋಗುವ ನಿಧಿಯ ಪ್ರಮಾಣ ಹೆಚ್ಚಾಗುವ ಸಂಭವವಿದೆ.

5. ಕಂಪೆನಿಗಳು

ಬ್ರಿಟನ್ ದೇಶದಲ್ಲಿರುವ ಭಾರತದ ಪ್ರಮುಖ ಕಂಪೆನಿಗಳಾದ ಭಾರತಿ ಏರ್‌ಟೆಲ್, ಟಾಟಾ ಮೋಟರ್ಸ್, ಮದರ್ಸನ್ ಸುಮಿ, ಎಚ್‌ಸಿಎಲ್ ಟೆಕ್ನಾಲಜೀಸ್, ಎಮ್ ಕ್ಯೂರ್ ಫಾರ್ಮಾ, ಅಪೋಲೋ ಟಯರ್ಸ್ ಮೇಲೆ ಬ್ರೆಕ್ಸಿಟ್ ತೀವ್ರ ಪರಿಣಾಮ ಬೀರಿ ಅವುಗಳ ಆದಾಯಕ್ಕೆ ಹೊಡೆತ ನೀಡುವುದಲ್ಲದೆ ಕೆಲವು ಕಂಪೆನಿಗಳು ದೇಶದಿಂದ ಹೊರನಡೆಯುವ ಸಾಧ್ಯತೆಗಳೂ ಇವೆ.

ಭಾರತದ ಐಟಿ ಕ್ಷೇತ್ರದ ಮೇಲೆಯೂ ಬ್ರೆಕ್ಸಿಟ್ ಪ್ರತಿಕೂಲ ಪರಿಣಾಮ ಬೀರಬಹುದು. ಆದರೆ ಇದರ ಸ್ಪಷ್ಟ ಚಿತ್ರಣ ಸಮಯ ಸರಿದಂತೆ ನಮಗೆ ಸಿಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News