×
Ad

ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಸಂವಿಧಾನ ತಿದ್ದುಪಡಿ ಅಗತ್ಯ: ಸಿದ್ದರಾಮಯ್ಯ

Update: 2016-06-25 18:19 IST

ಬೆಂಗಳೂರು, ಜೂ.25: ರಾಜ್ಯದಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗವಕಾಶವನ್ನು ಕಲ್ಪಿಸುವ ದೃಷ್ಟಿಯಿಂದ ಖಾಸಗಿ ವಲಯದಲ್ಲಿ ಮೀಸಲಾತಿಯನ್ನು ಜಾರಿ ಮಾಡಲು ಸಂವಿಧಾನದಲ್ಲಿ ತಿದ್ದುಪಡಿ ತರುವುದು ಅಗತ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಶನಿವಾರ ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಹಿಂದುಳಿದ ವರ್ಗಗಳ ಮುಂದಿರುವ ಸವಾಲುಗಳು’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಸರಕಾರಿ ವಲಯದಲ್ಲಿ ಉದ್ಯೋಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿವೆ. ಅದೇ ಸಂದರ್ಭದಲ್ಲಿ ಜಾಗತೀಕರಣ ಹಾಗೂ ಆಧುನೀಕರಣದ ಪರಿಣಾಮವಾಗಿ ಖಾಸಗಿ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಪ್ರತಿಯೊಬ್ಬರೂ ಉದ್ಯೋಗವನ್ನು ಪಡೆಯಬೇಕಾದರೆ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸುವ ಅಗತ್ಯವಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಿಸಿದರು.
ಸಂಸತ್‌ನಲ್ಲೂ ಮೀಸಲಾತಿ ಜಾರಿಯಾಗಲಿ: ಗ್ರಾಮ ಹಾಗೂ ಜಿಲ್ಲಾ ಪಂಚಾಯತ್‌ನಲ್ಲಿ ಮೀಸಲಾತಿ ಜಾರಿಯಲ್ಲಿದೆ. ಅದೇ ಮಾದರಿಯಲ್ಲಿಯೆ ಸಂಸತ್‌ನಲ್ಲೂ ಜಾರಿಯಾಗಬೇಕು. ಆಗ ಮಾತ್ರ ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲವಿಲ್ಲದ ಸಣ್ಣ ಸಮುದಾಯಗಳು ರಾಜಕೀಯ ಅಧಿಕಾರವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದರು.
ಜಾತಿ ಇರುವವರೆಗೂ ಮೀಸಲಾತಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿರುವಂತೆ ದೇಶದಲ್ಲಿ ಜಾತಿ ಇರುವವರೆಗೂ ಮೀಸಲಾತಿ ಜಾರಿಯಲ್ಲಿರುತ್ತದೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಕೇವಲ ಭಾರತದಲ್ಲಿ ಮಾತ್ರ ಮೀಸಲಾತಿ ಇರುವುದಲ್ಲ, ಅಮೆರಿಕಾ ಸೇರಿದಂತೆ ಅನೇಕ ದೇಶಗಳಲ್ಲಿ ಕಪ್ಪು ವರ್ಣಿಯರಿಗೆ ಮೀಸಲಾತಿಯನ್ನು ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಅಸ್ಪಶ್ಯತೆ ನಿಂತಿಲ್ಲ: ದೇಶಕ್ಕೆ ಸ್ವಾತಂತ್ರ ಬಂದು 66 ವರ್ಷಗಳಾದರೂ ಅಸ್ಪಶ್ಯತೆ ನಿಂತಿಲ್ಲ. ಇವತ್ತಿಗೂ ದಲಿತರ ಮೇಲೆ ಹಲವಾರು ರೀತಿಯಲ್ಲಿ ಶೋಷಣೆಗಳು ನಡೆಯುತ್ತಿವೆ. ಇವುಗಳು ನಿವಾರಣೆಯಾದರೆ ಮಾತ್ರ ಸಾಮಾಜಿಕ ಸುಧಾರಣೆ ಸಾಧ್ಯವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಪಟ್ಟಭದ್ರರ ಬಗ್ಗೆ ಎಚ್ಚರವಿರಲಿ: ಹಿಂದುಳಿದ ವರ್ಗಕ್ಕೆ ಮೀಸಲಾತಿ ಕಲ್ಪಿಸುವಂತೆ ಮಂಡಲ್ ಆಯೋಗ ಕೇಂದ್ರ ಸರಕಾರಕ್ಕೆ ವರದಿ ನೀಡಿತ್ತು. ಆದರೆ, ಪಟ್ಟಭದ್ರ ಹಿತಾಸಕ್ತಿಗಳು ಹಿಂದುಳಿದ ವರ್ಗಗಳ ಸಮುದಾಯದ ಜನತೆಯನ್ನೆ ಬಳಸಿಕೊಂಡು ಮಂಡಲ್ ಆಯೋಗದ ವರದಿಯನ್ನು ವಿರೋಧಿಸಿದವು. ಆ ಸಂದರ್ಭದಲ್ಲಿ ದಲಿತ ಸಂಘಟನೆಗಳು ಮಂಡಲ್ ಆಯೋಗದ ವರದಿ ಜಾರಿಯಾಗಲೆಬೇಕೆಂದು ಒತ್ತಾಯಿಸಿ ಬೀದಿಗಿಳಿದವು. ಈ ಹಿನ್ನೆಲೆಯಲ್ಲಿ ಹಿಂದುಳಿದ ಸಮುದಾಯವು ಪಟ್ಟಭದ್ರರ ಬಗ್ಗೆ ಸದಾ ಎಚ್ಚರಿಕೆಯಲ್ಲಿರಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ನಿವೃತ್ತ ನ್ಯಾ.ವೆಂಕಟಾಚಲಯ್ಯ, ಕೇಂದ್ರದ ಹಿಂದುಳಿದ ವರ್ಗಗಳ ಆಯೋಗದ ನಿವೃತ್ತ ಸದಸ್ಯ ಡಾ.ಪಿ.ಎಸ್.ಕೃಷ್ಣನ್, ದ್ರಾವಿಡ ಕಳಗಂ ಸಂಘಟನೆಯ ಅಧ್ಯಕ್ಷ ವೀರಮಣಿ, ಪ್ರೊ.ಕಾಂಚ ಐಲಯ್ಯ ಮತ್ತಿತರರಿದ್ದರು.

ಬಾಕ್ಸ್
  ಆರ್ಥಿಕ, ಸಾಮಾಜಿಕ ಹಾಗೂ ರಾಜಕಿಯವಾಗಿ ದುರ್ಬಲಗೊಂಡಿರುವ ಜಾತಿಗಳನ್ನು ಸಬಲರನ್ನಾಗಿ ಮಾಡುವ ಉದ್ದೇಶದಿಂದ ಜಾತಿ ಸಮೀಕ್ಷೆ ನಡೆಸಲಾಗುತ್ತಿದೆ. ಇದರಲ್ಲಿ ಯಾವುದೆ ಸ್ವಾರ್ಥ ರಾಜಕಾರಣವಿಲ್ಲ. ರಾಜ್ಯದಲ್ಲಿರುವ ಜಾತಿಗಳು ಯಾವ ಸ್ಥಿತಿಯಲ್ಲಿವೆ ಎಂಬುದರ ವಸ್ತುಸ್ಥಿತಿ ಇದ್ದರೆ ಮಾತ್ರ ಆ ಜಾತಿಗಳನ್ನು ಅಭಿವೃದ್ಧಿಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಮುಂದಿನ ಆಗಸ್ಟ್‌ನಲ್ಲಿ ಜಾತಿ ಸಮೀಕ್ಷೆ ಸರಕಾರದ ಕೈಸೇರಲಿದ್ದು, ಸಾರ್ವಜನಿಕರ ಮುಂದಿಡಲಾಗುವುದು.
-ಸಿದ್ದರಾಮಯ್ಯ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News