‘‘ಉಗ್ರವಾದ ಬೆಂಬಲಿಸಿಲ್ಲ, ಯಾವುದೇ ತನಿಖೆಗೆ ಸಿದ್ಧ’’

Update: 2016-07-07 05:44 GMT

ಮುಂಬೈ, ಜು.7: ತನ್ನ ಭಾಷಣಗಳು ಉಗ್ರವಾದವನ್ನು ಬೆಂಬಲಿಸುತ್ತಿವೆಯೆಂಬ ವರದಿಗಳನ್ನು ಅಲ್ಲಗಳೆದಿರುವ ಖ್ಯಾತ ಧಾರ್ಮಿಕ ವಿದ್ವಾಂಸ ಡಾ. ಝಾಕಿರ್ ನಾಯ್ಕ್ ತಾನು ಯಾವುದೇ ತನಿಖೆಗೆ ಸಿದ್ಧವೆಂದು ಬುಧವಾರ ಹೇಳಿದ್ದಾರೆ.

‘‘ನಾನು ಉಗ್ರವಾದವನ್ನು ಬೆಂಬಲಿಸುತ್ತೇನೆಂಬ ಹೇಳಿಕೆ ಸಂಪೂರ್ಣ ತರ್ಕವಿಲ್ಲದ್ದಾಗಿದೆ. ಒಂದೇ ಒಂದು ತನಿಖಾ ಏಜನ್ಸಿ ಕೂಡ ಝಾಕಿರ್ ನಾಯ್ಕಿ ಉಗ್ರವಾದ ಬೆಂಬಲಿಸುತ್ತಿದ್ದಾನೆಂದು ಹೇಳಿಲ್ಲ. ಗೃಹ ಸಚಿವಾಲಯ ನನ್ನ ಎಲ್ಲಾ ಭಾಷಣಗಳನ್ನು ಪರಿಶೀಲಿಸಬಹುದು,’’ ಎಂದು ಸಿಎನ್‌ಎನ್-ನ್ಯೂಸ್ 18 ವಾಹಿನಿಯೊಂದಿಗೆ ದೂರವಾಣಿ ಮೂಲಕ ಮಾತನಾಡುತ್ತಾ ಝಾಕಿರ್ ಹೇಳಿದ್ದಾರೆ.

ಢಾಕಾದ ಆರ್ಟಿಸಾನ್ ಬೇಕರಿ ರೆಸ್ಟಾರೆಂಟ್ ಮೇಲೆ ದಾಳಿ ನಡೆಸಿದವರಲ್ಲಿದ್ದರೆನ್ನಲಾದ ರೋಹನ್ ಇಮ್ತಿಯಾಜ್ ಹಾಗೂ ನಿಬ್ರಾಸ್ ಇಸ್ಲಾಂ ತಮ್ಮಿಂದ ಪ್ರೇರಿತರಾಗಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ.

‘‘ನನಗೆ ದೊಡ್ಡ ಅಭಿಮಾನಿ ಬಳಗವಿರುವುದರಿಂದ ನನ್ನಿಂದ ಹಲವು ಮಂದಿ ಪ್ರೇರೇಪಿತರಾಗಿರಬಹುದು. ಆದರೆ ವೈಯಕ್ತಿಕವಾಗಿ ಅವರೆಲ್ಲರ ಪರಿಚಯವಿಲ್ಲ. ಮಾಧ್ಯಮ ಹಾಗೂ ರಾಜಕಾರಣಿಗಳು ನನಗೆ ಕೆಟ್ಟ ಹೆಸರು ತರಬಹುದೆಂಬ ಭಯ ನನಗಿದೆ. ನನ್ನ ಫೋಟೊಗಳನ್ನು ಬಳಸಿ ನನ್ನ ಹೇಳಿಕೆಗಳನ್ನು ತಪ್ಪಾಗಿ ಬರೆಯುವವರಿದ್ದಾರೆ,’’ ಎಂದೂ ಅವರು ಹೇಳಿದ್ದಾರೆ.

ಮುಂಬೈನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷರಾಗಿರುವ ಝಾಕಿರ್, ತಾನು ಯಾವತ್ತೂ ಮುಸ್ಲಿಮರು ಭಯೋತ್ಪಾದಕರಾಗಬೇಕೆಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರಲ್ಲದೆ, ತಾನು ಹಾಗೆಂದು ಹೇಳಿದ್ದೇನೆನ್ನಲಾದ ವೀಡಿಯೊ, ತಿರುಚಲ್ಪಟ್ಟ ವೀಡಿಯೊ ಆಗಿದೆ ಎಂದು ಹೇಳಿದ್ದಾರೆ.

‘‘ಯಾವುದೇ ಮುಸ್ಲಿಮ್ ವ್ಯಕ್ತಿ ಯಾರನ್ನೂ ಬೆದರಿಸಬಾರದು. ಬೇರೆಯವರನ್ನು ಹತ್ಯೆ ಮಾಡುವವರು -ಅವರು ಮುಸ್ಲಿಮ್ ಯಾ ಇತರ ಧರ್ಮದವರಾಗಿರಬಹುದು-ನರಕಕ್ಕೆ ಹೋಗುತ್ತಾರೆ ಎಂದು ನಾನು ಯಾವತ್ತೂ ಹೇಳುತ್ತಿರುತ್ತೇನೆ’’ ಎಂದು ಈ ಸಂದರ್ಶನದಲ್ಲಿ ಝಾಕಿರ್ ತಿಳಿಸಿದ್ದಾರೆ.

‘‘ಪ್ರತಿಯೊಬ್ಬ ಮುಸ್ಲಿಮ್ ವ್ಯಕ್ತಿ ಎಲ್ಲಾ ಸಮಾಜ ಘಾತುಕ ಶಕ್ತಿಗಳ ಪಾಲಿಗೆ ಭಯೋತ್ಪಾದಕನಾಗಿರಬೇಕೆಂದು ನಾನು ಹೇಳಿದ್ದೆ. ಆದರೆ ಜನ ನಾನು ಉಗ್ರವಾದವನ್ನು ಪೋಷಿಸುತ್ತೇನೆಂದು ಹೇಳಿರುವುದು ದುರದೃಷ್ಟಕರ’’ ಎಂದು ಝಾಕಿರ್ ನಾಯ್ಕ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News