ಲೈಂಗಿಕ ಕಿರುಕುಳ ಆರೋಪ; ತನಿಖೆಗೆ ಸಹಕರಿಸದಂತೆ ರಾಜಭವನದ ಉದ್ಯೋಗಿಗಳಿಗೆ ಪಶ್ಚಿಮ ಬಂಗಾಳ ರಾಜ್ಯಪಾಲ ಸೂಚನೆ

Update: 2024-05-06 08:33 GMT

ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ (PTI)

ಕೊಲ್ಕತ್ತಾ: ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರು, ರಾಜಭವನದ ಎಲ್ಲ ಉದ್ಯೋಗಿಗಳಿಗೆ ರವಿವಾರ ಕಟ್ಟುನಿಟ್ಟಿನ ಸೂಚನೆ ನೀಡಿ, ಈ ಕುರಿತ ಪೊಲೀಸ್ ತನಿಖೆಗೆ ಸಹಕರಿಸದಂತೆ ಆದೇಶಿಸಿದ್ದಾರೆ ಎಂದು ವರದಿಯಾಗಿದೆ.

ಮಹಿಳೆಯೊಬ್ಬರು ನೀಡಿರುವ ದೂರಿನ ಬಗ್ಗೆ ತನಿಖೆಗೆ ಪೊಲೀಸರು ಆಗಮಿಸಿದಲ್ಲಿ ಅವರಿಗೆ ಯಾವುದೇ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದ್ದಾರೆ.

ರಾಜ್ಯಪಾಲರ ವಿರುದ್ಧದ ತನಿಖೆಗೆ ವಿಶೇಷ ತಂಡವನ್ನು ಪಶ್ಚಿಮ ಬಂಗಾಳ ಪೊಲೀಸರು ರಚಿಸಿದ್ದು, ರಾಜಭವನದಿಂದ ಸಿಸಿಟಿವಿ ದೃಶ್ಯಾವಳಿಯನ್ನು ಕೇಳಿದ್ದಾರೆ. ಆದರೆ ಪೊಲೀಸರಿಂದ ಬರುವ ಯಾವುದೇ ಸಂವಹನವನ್ನು ಕಡೆಗಣಿಸಬೇಕು ಎಂದು ರಾಜ್ಯಪಾಲರು ಸೂಚಿಸಿದ್ದಾರೆ. ದೂರು ದಾಖಲಾದ ತಕ್ಷಣ ರಾಜಭವನಕ್ಕೆ ಪೊಲೀಸರ ಪ್ರವೇಶವನ್ನು ಅವರು ನಿರ್ಬಂಧಿಸಿದ್ದಾರೆ.

ಈ ದೂರನ್ನು ಚುನಾವಣಾ ಪಿತೂರಿ ಎಂದು ಬೋಸ್ ಅಲ್ಲಗಳೆದಿದ್ದಾರೆ. ತಮ್ಮ ವಿರುದ್ಧ ದೂರು ದಾಖಲಾದ ಮರುದಿನ ಕೇರಳ ಕೊಚ್ಚಿಗೆ ಅವರು ತೆರಳಿದ್ದರು. ಸಂವಿಧಾನದ 361(2) ಮತ್ತು (3)ನೇ ವಿಧಿ ಅನ್ವಯ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಯಾವುದೇ ಅಪರಾಧ ಪ್ರಕ್ರಿಯೆಗಳಿಂದ ವಿನಾಯ್ತಿ ಪಡೆಯುವ ವಿಶೇಷ ಹಕ್ಕು ಹೊಂದಿದ್ದಾರೆ ಎಂದು ಅವರು ರಾಜಭವನಕ್ಕೆ ನೀಡಿದ ಸಂದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಆದ್ದರಿಂದ ಸರ್ಕಾರ, ರಾಜ್ಯಪಾಲರ ವಿರುದ್ಧ ಯಾವುದೇ ಬಗೆಯ ಅಪರಾಧ ಪ್ರಕ್ರಿಯೆಯ ನಿಲುವಳಿಯನ್ನು ಆರಂಭಿಸುವಂತಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಸಂವಿಧಾನದ 361ನೇ ವಿಧಿಯಡಿ ಗವರ್ನರ್ ಹುದ್ದೆಯಲ್ಲಿರುವವರ ವಿರುದ್ಧ ಯಾವುದೇ ಅಪರಾಧ ವಿಚಾರಣಾ ಪ್ರಕ್ರಿಯೆ ನಡೆಸದಂತೆ ವಿನಾಯಿತಿ ಇರುವುದರಿಂದ ಪೊಲೀಸರು ವಿಚಾರಣೆ ನಡೆಸಲು ಸಾಧ್ಯವೆ? ಸಾಕ್ಷ್ಯ ಸಂಗ್ರಹಿಸಲು ಅವಕಾಶವಿದೆಯೆ ಎಂಬ ಪ್ರಶ್ನೆಗಳು ಎದ್ದಿವೆ.

ಬೋಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಮಹಿಳೆ 2019ರಿಂದ ರಾಜಭವನದಲ್ಲಿ ತಾತ್ಕಾಲಿಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಮೊನ್ನೆ ಗುರುವಾರ ರಾಜ್ಯಪಾಲರು ತಮ್ಮ ಪದೋನ್ನತಿ ಬಗ್ಗೆ ಚರ್ಚೆ ಮಾಡಿದ್ದರು. ಈ ವೇಳೆ ಈ ಅಹಿತಕರ ಪ್ರಸಂಗ ನಡೆದಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೆ ಮೊದಲು ಆಕೆ ರಾಜಭವನ ಪೊಲೀಸರಿಗೂ ಈ ಬಗ್ಗೆ ದೂರಿದ್ದರು ಎಂದು ವರದಿಗಳಿವೆ.

ಪ್ರಕರಣ ದಾಖಲಾದ ಬೆನ್ನಲ್ಲೇ ಆರೋಪಗಳನ್ನು ನಿರಾಕರಿಸಿದ್ದ ಬೋಸ್‌, ಇದೊಂದು ರಾಜಕೀಯ ಷಡ್ಯಂತ್ರ ಎಂದಿದ್ದರು.

ರಾಜಭವನದ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್ ನಲ್ಲಿ, ಪ್ರಸ್ತುತ ನಡೆಯುತ್ತಿರುವ ತನಿಖೆಗೆ ಸಂಬಂಧಿಸಿದಂತೆ ಆನ್‌ಲೈನ್, ಆಫ್‌ಲೈನ್, ವೈಯಕ್ತಿಕವಾಗಿ, ಫೋನ್ ಮೂಲಕ ಅಥವಾ ಯಾವುದೇ ಇತರ ವಿಧಾನಗಳ ಮೂಲಕ ಯಾವುದೇ ಹೇಳಿಕೆ ನೀಡದಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.

ಗವರ್ನರ್ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದ ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರಿಗೂ ಬೋಸ್ ನಿಷೇಧ ಹೇರಿದ್ದಾರೆ.

ರಾಜ್ಯಪಾಲರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಸಚಿವೆ ವಿರುದ್ಧ ಮುಂದಿನ ಕಾನೂನು ಕ್ರಮಗಳ ಕುರಿತು ಸಲಹೆಗಾಗಿ ದೇಶದ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸಲಾಗಿದೆ ಎಂದು ರಾಜಭವನದ ಹೇಳಿಕೆ ತಿಳಿಸಿರುವುದಾಗಿ ವರದಿಯಾಗಿದೆ.

ಸಚಿವೆ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ರಾಜಧಾನಿ ಕೋಲ್ಕತ್ತಾ, ಡಾರ್ಜಿಲಿಂಗ್ ಮತ್ತು ಬ್ಯಾರಕ್‌ಪೋರ್‌ನಲ್ಲಿರುವ ಭವನದ ಆವರಣಕ್ಕೆ ಪ್ರವೇಶಿಸದಂತೆ ರಾಜ್ಯಪಾಲರು ನಿರ್ಬಂಧ ವಿಧಿಸಿರುವುದಾಗಿ ವರದಿಗಳು ತಿಳಿಸಿವೆ.

ಕಳೆದ ವರ್ಷ ಪಂಚಾಯತ್ ಚುನಾವಣೆ ವೇಳೆ ಪಶ್ಚಿಮ ಬಂಗಾಳದಲ್ಲಿ ತೀವ್ರ ಹಿಂಸಾಚಾರ ನಡೆದಿತ್ತು. ಆಗ ರಾಜ್ಯಪಾಲ ಬೋಸ್ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಜನರನ್ನು ಮಾತನಾಡಿಸಿದ ಬಳಿಕ ವಿರೋಧ ಪಕ್ಷದವರ ರೀತಿಯಲ್ಲಿ ಮಾತನಾಡಿದ್ದರು. ಅವರು ಆಡಳಿತಾರೂಢ ಟಿಎಂಸಿಯನ್ನು ನಿರಂತರವಾಗಿ ಟೀಕಿಸುತ್ತಲೇ ಬಂದವರು. ಅವರನ್ನು ಬಿಜೆಪಿ ಕೈಗೊಂಬೆ ಎಂದು ಟಿಎಂಸಿ ಕೂಡ ಹೇಳುತ್ತಲೇ ಬಂದಿದೆ.

ಈ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ವಿರುದ್ಧ ನ್ಯಾಯಾಂಗ ಉದ್ಯೋಗಿಯೊಬ್ಬರು ಲೈಂಗಿಕ ಕಿರುಕುಳ ಆರೋಪ ಮಾಡಿದಾಗಲೂ ಅವರೇ ತಮ್ಮ ವಿರುದ್ಧದ ಆರೋಪದ ವಿಚಾರಣೆ ನಡೆಸಿ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡದ್ದು ನಡೆದಿತ್ತು. ಆರೋಪ ಮಾಡಿದಾಕೆಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿತ್ತು. ಕಡೆಗೆ ನಿವೃತ್ತಿ ನಂತರ ಅದೇ ರಂಜನ್ ಗೊಗೊಯ್ ಅವರನ್ನು ಮೋದಿ ಸರ್ಕಾರ ರಾಜ್ಯಸಭಾ ಸದಸ್ಯರನ್ನಾಗಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News