ಬೆಂಗಳೂರಿನಲ್ಲಿ ನಾಲ್ಕು ಲಕ್ಷ ವರ್ಷಗಳ ಹಿಂದೆಯೇ ಮಾನವ ವಾಸವಿದ್ದ: ಪುರಾತತ್ವ ಶಾಸ್ತ್ರಜ್ಞ
ಬೆಂಗಳೂರು, ಜು.8: ಕರ್ನಾಟಕದ ರಾಜಧಾನಿಯಲ್ಲಿ ನಾಲ್ಕು ಲಕ್ಷ ವರ್ಷಗಳ ಹಿಂದೆಯೇ ಮಾನವ ವಾಸವಿದ್ದ ಎಂದು ಪುರಾತತ್ವಶಾಸ್ತ್ರಜ್ಞರೊಬ್ಬರು ಪ್ರತಿಪಾದಿಸಿದ್ದಾರೆ. ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ದೊರೆತ ಇತಿಹಾಸಪೂರ್ವ ದಾಖಲೆಗಳಿಂದ ಇದು ದೃಢಪಟ್ಟಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಶಿಲಾಯುಗದಲ್ಲೇ ಜನ ಇಲ್ಲಿ ವಾಸವಾಗಿದ್ದಕ್ಕೆ ಪುರಾವೆಗಳು ಸಿಕ್ಕಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಚೀನ ಶಾಸ್ತ್ರ ಮತ್ತು ಪುರಾತತ್ವ ಇತಿಹಾಸ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಕೆ.ಬಿ.ಶಿವತಾರಕ್ ಹೇಳಿದ್ದಾರೆ.
"ಇದಕ್ಕೆ ಸಂಬಂಧಿಸಿದ ಪುರಾವೆಗಳು 2016ರ ಮೇ ತಿಂಗಳಲ್ಲಿ ಬನಶಂಕರಿ 2ನೇ ಹಂತದ ಕದಿರೇನಹಳ್ಳಿ ಕೆಳಸೇತುವೆ ಬಳಿ ಸಿಕ್ಕಿವೆ. ನೀರು ಸೋರಿಕೆಯನ್ನು ತಡೆಯಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ರಸ್ತೆ ಅಗೆದಾಗ ಈ ಪುರಾವೆಗಳು ಸಿಕ್ಕಿವೆ. ಅಲ್ಲೇ ಪಕ್ಕದಲ್ಲಿ ವಾಸಿಸುತ್ತಿದ್ದ ನಾನು ಕುತೂಹಲದಿಂದ ಅಧ್ಯಯನ ನಡೆಸಿದೆ. ಅಗೆದಾಗ ಸಿಕ್ಕಿದ ಕಲ್ಲುಗಳನ್ನು ನಾನು ಪರಿಶೀಲಿಸಿದೆ. ಕೆಲ ಕಲ್ಲುಗಳನ್ನು ಒಯ್ದು ಸ್ವಚ್ಛಗೊಳಿಸಿದಾಗ, ಹಿಂದೆ ತುಮಕೂರು, ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಸಂಗ್ರಹಿಸಿದ್ದ ಶಿಲೆಗಳಿಗೆ ಸಾಮ್ಯತೆ ಹೊಂದಿದ್ದವು" ಎಂದು ವಿವರಿಸಿದ್ದಾರೆ.
ಐದು ಶಿಲಾ ಸಾಧನಗಳನ್ನು ಅವರು ಸಂಗ್ರಹಿಸಿದ್ದು, ಕೈ- ಕೊಡಲಿ, ಉಜ್ಜುವ ಸಾಧನ, ಎಲೆಯಾಕಾರದ ಸಾಧನ, ಸುತ್ತಿಗೆ ಕಲ್ಲು ಹಾಗೂ ಪುಟ್ಟ ಶಿಲಾಕೊಡಲಿ ಸಿಕ್ಕಿವೆ. ಇವು ಬೆಣಚುಕಲ್ಲು ಮತ್ತು ಸ್ಫಟಿಕದಿಂದ ಮಾಡಲ್ಪಟ್ಟವು. 7.11 ಸೆಂಟಿಮೀಟರ್ ಉದ್ದ ಹಾಗೂ 4.7 ಸೆಂ.ಮೀ. ಅಗಲ ಇವೆ ಎಂದು ಹೇಳಿದ್ದಾರೆ.