×
Ad

ರಾಜೀನಾಮೆ ಪ್ರಮೇಯವೇ ಇಲ್ಲ: ಸಚಿವ ಜಾರ್ಜ್

Update: 2016-07-08 19:53 IST

ಬೆಂಗಳೂರು, ಜು. 8: ಆತ್ಮಹತ್ಯೆಗೆ ಶರಣಾಗಿರುವ ಡಿವೈಎಸ್ಪಿ ಎಂ.ಕೆ.ಗಣಪತಿ ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಪ್ರಮೇಯವೇ ಇಲ್ಲ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟಣೆ ನೀಡಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಗೂ ಮುನ್ನ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲ. ಡಿವೈಎಸ್ಪಿ ಗಣಪತಿ ದಕ್ಷ, ಪ್ರಾಮಾಣಿಕ ಅಧಿಕಾರಿ ಎಂದು ಶ್ಲಾಘಿಸಿದರು.

ಕರ್ತವ್ಯ ಲೋಪ ಪ್ರಕರಣ ಸಂಬಂಧ ಎರಡು ವರ್ಷಗಳ ಹಿಂದೆ ಇನ್ಸ್‌ಪೆಕ್ಟರ್ ಆಗಿದ್ದ ಗಣಪತಿ ಅಮಾನತ್ತುಗೊಂಡಿದ್ದರು. ಅಮಾನತ್ತು ಹಿಂಪಡೆಯುವಂತೆ ತಮ್ಮನ್ನು ಕೋರಿದ್ದರು. ಆದರೆ, ಆ ವೇಳೆ ತನಿಖೆಯಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೆ ಎಂದು ಜಾರ್ಜ್ ಹೇಳಿದರು.

ಸಾಕ್ಷಾ ನೀಡಲಿ: ತಾವು ಸಚಿವರಾದ ದಿನದಿಂದಲೂ ಬಿಜೆಪಿ ಮುಖಂಡರು ತನ್ನ ರಾಜೀನಾಮೆ ಕೇಳುತ್ತಿದ್ದಾರೆ. ಆದರೆ, ಸುಮ್ಮನೆ ರಾಜೀನಾಮೆ ಕೇಳುವುದು ಸರಿಯಲ್ಲ. ತನ್ನ ರಾಜೀನಾಮೆಗೆ ಸೂಕ್ತ ಸಾಕ್ಷಾಧಾರಗಳನ್ನು ನೀಡಲಿ ಎಂದು ಜಾರ್ಜ್ ಇದೇ ವೇಳೆ ಬಿಜೆಪಿ ಮುಖಂಡರಿಗೆ ಸವಾಲು ಹಾಕಿದರು.

ತಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಸಂಬಂಧಪಟ್ಟಂತೆ ಯಾವ ರೀತಿ ತನಿಖೆ ಕೈಗೊಳ್ಳಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News