ಶರಪೋವಾ ಒಲಿಂಪಿಕ್ಸ್ ಕನಸು ಭಗ್ನ

Update: 2016-07-11 18:08 GMT

ಲೌಸಾನ್, ಜು.11: ನಿಷೇಧಿತ ಉದ್ದೀಪನಾ ದ್ರವ್ಯ ಸೇವಿಸಿದ ಆರೋಪದಲ್ಲಿ ಅಂತಾರಾಷ್ಟ್ರೀಯ ಟೆನಿಸ್ ಸಂಸ್ಥೆ(ಐಟಿಎಫ್)ಯಿಂದ ಎರಡು ವರ್ಷಗಳ ಕಾಲ ನಿಷೇಧಕ್ಕೆ ಗುರಿಯಾಗಿರುವ ಮರಿಯಾ ಶರಪೋವಾ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸುತ್ತಿರುವ ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್) ತನ್ನ ತೀರ್ಪು ಪ್ರಕಟನೆಯನ್ನು ಎರಡು ತಿಂಗಳ ಕಾಲ ಮುಂದೂಡಿದೆ.ಈ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ರಿಯೋ ಒಲಿಂಪಿಕ್ಸ್‌ನಿಂದ ಶರಪೋವಾ ಹೊರಗುಳಿದಿದ್ದಾರೆ.

ಟೆನಿಸ್‌ನ ಖ್ಯಾತ ಆಟಗಾರ್ತಿ 29ರ ಹರೆಯದ ಶರಪೋವಾ ಜನವರಿಯಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ವೇಳೆ ನಿಷೇಧಿತ ದ್ರವ್ಯ ಮೆಲ್ಡೊನಿಯಮ್‌ನ್ನು ಸೇವಿಸಿದ್ದ ಕಾರಣ ಡೋಪಿಂಗ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದರು. ಸಿಎಎಸ್ ಜು.18 ರಂದು ತನ್ನ ತೀರ್ಪನ್ನು ಪ್ರಕಟಿಸಬೇಕಾಗಿತ್ತು. ಆದರೆ, ಇದೀಗ ಅದು ತನ್ನ ನಿರ್ಧಾರವನ್ನು ಸೆಪ್ಟಂಬರ್ 19ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ.

ಸಿಎಎಸ್ ಈ ಮೊದಲೇ ತೀರ್ಪನ್ನು ಪ್ರಕಟಿಸಿದ್ದರೆ ಶರಪೋವಾ ಆಗಸ್ಟ್ 5 ರಿಂದ ಆರಂಭವಾಗಲಿರುವ ರಿಯೋ ಗೇಮ್ಸ್‌ನಲ್ಲಿ ಭಾಗವಹಿಸಬಹುದಿತ್ತು. ಜ.1 ರಂದು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ವಾಡಾ ಮೆಲ್ಡೋನಿಯಮ್‌ನ್ನು ನಿಷೇಧಿತ ಪಟ್ಟಿಯಲ್ಲಿ ಸೇರಿಸಿತ್ತು. ಶರಪೋವಾ ಕಳೆದ 10 ವರ್ಷಗಳಿಂದ ಹೃದಯ ಸಂಬಂಧಿತ ಸಮಸ್ಯೆಗಾಗಿ ಮೆಲ್ಡೊನಿಯಮ್‌ನ್ನು ಸೇವಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News