ಜೊಕೊವಿಕ್‌ಗೆ ಮರ್ರೆ ತೀವ್ರ ಸ್ಪರ್ಧೆ

Update: 2016-07-11 18:23 GMT

ಲಂಡನ್, ಜು.11: ವಿಂಬಲ್ಡನ್ ಚಾಂಪಿಯನ್ ಆ್ಯಂಡಿ ಮರ್ರೆ ಸೋಮವಾರ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ನಂ.1 ಆಟಗಾರ ನೊವಾಕ್ ಜೊಕೊವಿಕ್‌ಗಿಂತ ಕಡಿಮೆ ಅಂಕಗಳ ಅಂತರವನ್ನು ಕಾಯ್ದುಕೊಳ್ಳಲು ಯಶಸ್ವಿಯಾಗಿದ್ದಾರೆ.

ವಿಂಬಲ್ಡನ್ ಆರಂಭಕ್ಕೆ ಮೊದಲು ಜೊಕೊವಿಕ್ ಅವರು ನಂ.2ನೆ ಆಟಗಾರ ಮರ್ರೆಗಿಂತ ಎರಡು ಪಟ್ಟು ಹೆಚ್ಚು ಅಂಕ ಹೊಂದಿದ್ದರು. ಟೂರ್ನಿಯಲ್ಲಿ ಜೊಕೊವಿಕ್ 3ನೆ ಸುತ್ತಿನಲ್ಲಿ ಸೋತಿದ್ದಾರೆ. ಮರ್ರೆ ಮೂರನೆ ಬಾರಿ ಗ್ರಾನ್‌ಸ್ಲಾಮ್ ಟ್ರೋಫಿಯನ್ನು ಜಯಿಸಿದ್ದಾರೆ. ಈ ಮೂಲಕ ಮರ್ರೆ ಅವರ ಪಾಯಿಂಟ್‌ನಲ್ಲೂ ಗಣನೀಯ ಏರಿಕೆಯಾಗಿದೆ.

ವಿಂಬಲ್ಡನ್ ಟೂರ್ನಿಯಲ್ಲಿ ಏಳನೆ ಪ್ರಶಸ್ತಿ ಹಾಗೂ 22ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯನ್ನು ಜಯಿಸಿರುವ ಸೆರೆನಾ ವಿಲಿಯಮ್ಸ್ ಮಹಿಳೆಯರ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ನಂ.1 ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ರನ್ನರ್ಸ್‌-ಅಪ್ ಜರ್ಮನಿಯ ಆ್ಯಂಜೆಲಿಕ್ ಕೆರ್ಬರ್ 2 ಸ್ಥಾನ ಮೇಲಕ್ಕೇರಿ 2ನೆ ಸ್ಥಾನ ತಲುಪಿದ್ದಾರೆ.

34ರ ಹರೆಯದ ಸೆರೆನಾ 2013ರ ಫೆಬ್ರವರಿಯಿಂದ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ವಿಂಬಲ್ಡನ್ ಎರಡನೆ ಸುತ್ತಿನಲ್ಲಿ ಮುಗ್ಗರಿಸಿರುವ ಸ್ಪೇನ್‌ನ ಗಾರ್ಬೈನ್ ಮುಗುರುಝ 2ರಿಂದ 3ನೆ ಸ್ಥಾನಕ್ಕೆ ಕುಸಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News