ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ನ್ಯಾಯಾಂಗ ತನಿಖೆಗೆ
ಬೆಂಗಳೂರು, ಜು.13: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸೀಮಿತವಾಗಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.ಬುಧವಾರ ಭೋಜನ ವಿರಾಮದ ಬಳಿಕ ತಮ್ಮ ಉತ್ತರವನ್ನು ಮುಂದುವರೆಸಿದ ಅವರು, ಸಿಐಡಿ ಮೇಲೆ ನಂಬಿಕೆಯಿದೆ. ಆದರೂ, ಸ್ವಯಂಪ್ರೇರಿತವಾಗಿ ನ್ಯಾಯಾಂಗ ತನಿಖೆಗೆ ಈ ಪ್ರಕರಣವನ್ನು ಒಪ್ಪಿಸಲಾಗುತ್ತಿದೆ ಎಂದರು.ತನಿಖಾ ವರದಿಯನ್ನು ಆರು ತಿಂಗಳಲ್ಲಿ ತರಿಸಿಕೊಂಡು, ತಪ್ಪಿತಸ್ಥರು ಅಧಿಕಾರಿಗಳಿರಲಿ, ರಾಜಕಾರಣಿಗಳಿರಲಿ ಯಾರೇ ಆಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷದ ಉಪನಾಯಕ ಆರ್.ಅಶೋಕ್, ನ್ಯಾಯಾಂಗ ತನಿಖೆಗೆ ಸದನದ ಯಾವೊಬ್ಬ ಸದಸ್ಯರು ಆಗ್ರಹ ಮಾಡಿರಲಿಲ್ಲ. ಆದರೂ, ನಾವು ಯಾರೂ ಕೇಳದೆ ಇದ್ದರೂ ನ್ಯಾಯಾಂಗ ತನಿಖೆಯ ‘ಭಾಗ್ಯ’ವನ್ನು ನಮಗೆ ಕಲ್ಪಿಸುತ್ತಿರುವುದೇಕೆ ಎಂಬುದು ಗೊತ್ತಾಗುತ್ತಿಲ್ಲ ಎಂದರು.ನ್ಯಾಯಾಂಗ ತನಿಖೆಗೆ ಯಾರೂ ಆಗ್ರಹ ಮಾಡಿಲ್ಲ. ಆದರೆ, ಜನರಲ್ಲಿರುವ ಗೊಂದಲವನ್ನು ನಿವಾರಿಸಲು, ನ್ಯಾಯಾಂಗ ತನಿಖೆಗೆ ಸರಕಾರ ಸ್ವಯಂಪ್ರೇರಿತ ತೀರ್ಮಾನವನ್ನು ಕೈಗೊಂಡಿದೆ. ತನಿಖೆಯ ಸತ್ಯಾಂಶವನ್ನು ಜನರ ಮುಂದಿಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.ಆರೋಪಿಗಳ ಬಂಧನಕ್ಕೆ ಕ್ರಮ: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟರಾಜ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಇನ್ನು ಮೂರು ಮಂದಿ ಆರೋಪಿಗಳಾದ ವಿಎಚ್‌ಪಿ ಕಾರ್ಯಕರ್ತ ಖಾಂಡ್ಯ ಪ್ರವೀಣ್, ಅಭಿಜಿತ್ ಹಾಗೂ ಮತ್ತೊಬ್ಬನನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಖಾಂಡ್ಯ ಪ್ರವೀಣ್ ವಿರುದ್ಧ 32 ಪ್ರಕರಣಗಳು ದಾಖಲಾಗಿವೆ. 2014ರಲ್ಲಿಯೆ ಆತನ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಸಾಕ್ಷಾಧಾರಗಳ ಕೊರತೆಯಿಂದ ಆತ ಪಾರಾಗಿದ್ದನು ಎಂದ ಅವರು, ಗಣಪತಿ ಹಾಗೂ ಕಲ್ಲಪ್ಪ ಪ್ರಕರಣದಲ್ಲಿ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೆ ಉದ್ಭವಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.ಪೊಲೀಸರು ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಪ್ರತಿವರ್ಷ ಪೊಲೀಸರ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. 2003-13ರವರೆಗೆ 122 ಮಂದಿ ಪೊಲೀಸರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.ಪುನರ್ ಪರಿಶೀಲನೆ ಸಾಧ್ಯವಿಲ್ಲ:ಡಿವೈಎಸ್ಪಿ ಅನುಪಮಾ ಶೆಣೈ ಜೂ.4ರಂದು ತಮ್ಮ ಸ್ಥಾನಕ್ಕೆ ವೈಯಕ್ತಿಕ ಕಾರಣಗಳನ್ನು ನೀಡಿ ಬಳ್ಳಾರಿ ಎಸ್ಪಿಗೆ ರಾಜೀನಾಮೆ ನೀಡಿದರು. ಆನಂತರ, ಎಸ್ಪಿ, ಪೊಲೀಸ್ ಮಹಾ ನಿರ್ದೇಶಕರು ಸತತವಾಗಿ ಅವರನ್ನು ಸಂಪರ್ಕ ಮಾಡಿ ಮನವೊಲಿಸಲು ಪ್ರಯತ್ನಿಸಿದರು ಅವರು ತಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ. ಆದುದರಿಂದ, ಜೂ.7ರಂದು ಸರಕಾರ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ. ಈ ಬಗ್ಗೆ ಪುನರ್ ಪರಿಶೀಲನೆ ಸಾಧ್ಯವಿಲ್ಲ ಎಂದು ಅವರು ಹೇಳಿದರು.ಅನುಪಮಾ ಶೆಣೈಗೆ ಯಾರಾದರೂ ಕಿರುಕುಳ ನೀಡುತ್ತಿದ್ದರೆ ಅದನ್ನು ಅವರು ಮೇಲಾಧಿಕಾರಿಗಳು ಅಥವಾ ಸರಕಾರದ ಗಮನಕ್ಕೆ ತರಬೇಕಿತ್ತು. ಆದರೆ, ಅಂತಹ ಪ್ರಯತ್ನವನ್ನು ಅನುಪಮಾ ಶೆಣೈ ಮಾಡಲೇ ಇಲ್ಲ. ಕೇವಲ ಎರಡು ಸಾಲುಗಳನ್ನು ಒಳಗೊಂಡ ರಾಜೀನಾಮೆ ಪತ್ರವನ್ನು ಮಾತ್ರ ಅವರು ಇಲಾಖೆಗೆ ಸಲ್ಲಿಸಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.ಕಡತ ನಾಪತ್ತೆ: ಸರಕಾರದ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಜಗದೀಶ್‌ಶೆಟ್ಟರ್, ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣವನ್ನು ಬಯಲಿಗೆಳೆದಾಗ ನ್ಯಾಯಾಂಗ ತನಿಖೆಗೆ ಸರಕಾರ ಒಪ್ಪಿಸಿತು. ಇದೀಗ, ಆ ಪ್ರಕರಣಕ್ಕೆ ಸಂಬಂಧಿಸಿದ 40 ಕಡತಗಳು ನಾಪತ್ತೆಯಾಗಿರುವುದನ್ನು ಸರಕಾರವೇ ಒಪ್ಪಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕ್ರಿಕೆಟ್ ಬೆಟ್ಟಿಂಗ್, ಪಿಎಸ್ಸೈ ಮಲ್ಲಿಕಾರ್ಜುನ ಬಂಡೆ ಹತ್ಯೆ ಪ್ರಕರಣ ಸಿಐಡಿ ತನಿಖೆಗೆ ವಹಿಸಲಾಗಿತ್ತು. ಆದರೆ, ಏನು ಪ್ರಯೋಜನವಾಯಿತು. ಸರಕಾರದ ವಿರುದ್ಧ ಆರೋಪಗಳನ್ನು ಮಾಡಿದರೆ ಅಲ್ಪಸಂಖ್ಯಾತರನ್ನು ಮುಂದಿಟ್ಟುಕೊಂಡು ‘ಬಾರಾ ಖೂನ್ ಮಾಫ್’(12 ಕೊಲೆಗಳು ಮಾಡಿದರೂ ಕ್ಷಮೆ) ಎಂಬ ಧೋರಣೆಯನ್ನು ಸರಕಾರ ಅನುಸರಿಸುತ್ತಿದೆ ಎಂದು ಅವರು ಕಿಡಿಗಾರಿದರು.ನ್ಯಾಯಾಂಗ ತನಿಖೆ ಪೂರ್ಣಗೊಳ್ಳುವವರೆಗೆ ಜಾರ್ಜ್‌ರನ್ನು ಸಚಿವ ಸಂಪುಟದಿಂದ ಕೈ ಬಿಡಿ. ತನಿಖೆಯಲ್ಲಿ ಅವರು ನಿರಪರಾಧಿ ಎಂದು ಸಾಬೀತಾದರೆ ಅವರನ್ನು ಬೇಕಾದರೆ ಉಪಮುಖ್ಯಮಂತ್ರಿಯನ್ನಾದರೂ ಮಾಡಿ, ಇಲ್ಲ ಮುಖ್ಯಮಂತ್ರಿ ಮಾಡಿ ನಮ್ಮದೇನು ಅಭ್ಯಂತರವಿಲ್ಲ ಎಂದು ಶೆಟ್ಟರ್ ಹೇಳಿದರು.ಕೆ.ಜೆ.ಜಾರ್ಜ್ ನಿಮ್ಮ ‘ಕಿಚನ್ ಕ್ಯಾಬಿನೆಟ್’ನಲ್ಲಿದ್ದಾರೆ. ಆದುದರಿಂದ, ಅವರ ರಕ್ಷಣೆಗೆ ನೀವು ನಿಂತಿದ್ದೀರಾ. ಅಲ್ಪಸಂಖ್ಯಾತರು ಹಾಗೂ ದಲಿತರ ಪರವಾಗಿ ಮಾತನಾಡುವ ನೀವು ಖಮರುಲ್ ಇಸ್ಲಾಮ್ ಹಾಗೂ ಶ್ರೀನಿವಾಸ್‌ಪ್ರಸಾದ್‌ರನ್ನು ಯಾಕೆ ಸಂಪುಟದಿಂದ ಕೈ ಬಿಟ್ಟಿದ್ದು ಎಂದು ಅವರು ಪ್ರಶ್ನಿಸಿದರು.