ಡಿವೈಎಸ್ಪಿ ಕಲ್ಲಪ್ಪ ಆತ್ಮಹತ್ಯೆ ಪ್ರಕರಣ : ಮಾಜಿ ಸಚಿವ-ಹಾಲಿ ಶಾಸಕರ ಕೈವಾಡ: ನಡಹಳ್ಳಿ ಆರೋಪ
ಬೆಂಗಳೂರು, ಜು. 13: ಚಿಕ್ಕಮಗಳೂರು ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದಲ್ಲಿ ‘ಮಾಜಿ ಸಚಿವ ಹಾಗೂ ಹಾಲಿ ಶಾಸಕರೊಬ್ಬರ ಕೈವಾಡವಿದ್ದು, ಸೂಕ್ತ ತನಿಖೆ ನಡೆಸಿದರೆ ಸತ್ಯಾಂಶ ಹೊರಬರಲಿದೆ’ ಎಂಬ ಆಡಳಿತ ಪಕ್ಷದ ಸದಸ್ಯ ಎ.ಎಸ್. ಪಾಟೀಲ್ ನಡಹಳ್ಳಿ ಹೇಳಿಕೆ ತೀವ್ರ ಆಕ್ಷೇಪ ಹಾಗೂ ಚರ್ಚೆಗೆ ಗ್ರಾಸವಾಯಿತು.
ಬುಧವಾರ ವಿಧಾನಸಭೆಯಲ್ಲಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸರಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ನಡಹಳ್ಳಿ, ಕಲ್ಲಪ್ಪ ಹಂಡಿಬಾಗ್ ಅಮಾಯಕ. ಆತನ ಆತ್ಮಹತ್ಯೆಗೆ ಮಾಜಿ ಸಚಿವರೊಬ್ಬರು ಕಾರಣ ಎಂದು ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿದರು.
ಅಲ್ಲದೆ, ಅಪಹರಣ ಪ್ರಕರಣದ ಆರೋಪಿಗಳ ಬಿಡುಗಡೆಗೆ ಚಿಕ್ಕಮಗಳೂರಿನ ಮಾಜಿ ಸಚಿವರೆ ದೂರವಾಣಿ ಕರೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆದರೆ ಸತ್ಯಾಂಶ ಬೆಳಕಿಗೆ ಬರಲಿದೆ. ಅಲ್ಲದೆ, ಈ ಸಂಬಂಧ ತನ್ನ ಬಳಿ ದಾಖಲಾತಿಯೂ ಇದೆ ಎಂದು ಕಡತವನ್ನು ಪ್ರದರ್ಶಿಸಿದರು.
ಕೂಡಲೇ ಮಧ್ಯ ಪ್ರವೇಶಿಸಿದ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್ ಹಾಗೂ ಆಡಳಿತ ಪಕ್ಷದ ಸದಸ್ಯ ಕೆ.ಎನ್.ರಾಜಣ್ಣ, ಈ ಸದನದ ಸದಸ್ಯರೊಬ್ಬರ ಹೆಸರನ್ನು ಉಲ್ಲೇಖಿಸಿದ್ದು, ನನ್ನ ಕ್ಷೇತ್ರದ ಜನತೆ ತನ್ನನ್ನು ಅನುಮಾನದಿಂದ ನೋಡುವ ಸಾಧ್ಯತೆಗಳಿವೆ. ಹೀಗಾಗಿ ಅವರ ಹೆಸರನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು.
ಬಳಿಕ ಮಾತನಾಡಿದ ನಡಹಳ್ಳಿ, ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾಜಿ ಸಚಿವರು ಪ್ರವಾಸಿ ಮಂದಿರಕ್ಕೆ ಕರೆಸಿಕೊಂಡು ಅಪಹರಣ ಪ್ರಕರಣದ ಆರೋಪಿಗಳನ್ನು ಬಿಡುವಂತೆ ನಿರ್ದೇಶನ ನೀಡಿದ್ದಾರೆಂಬ ಮಾಹಿತಿಯಿದೆ. ಹೀಗಾಗಿ ಪ್ರಕರಣದ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.
ಇದರಿಂದ ಒಮ್ಮೆಗೇ ಆಕ್ರೋಶಿತರಾದ ವಿಪಕ್ಷ ಸದಸ್ಯರಾದ ಸಿ.ಟಿ.ರವಿ, ಲಕ್ಷ್ಮಣ ಸವದಿ, ಜೀವರಾಜ್, ಅಪ್ಪಚ್ಚು ರಂಜನ್, ಸುನಿಲ್ ಕುಮಾರ್ ಸೇರಿದಂತೆ ಹಲವು ಸದಸ್ಯರು, ‘ಈ ಸದನದ ಸದಸ್ಯರ ಬಗ್ಗೆ ಸುಳ್ಳು ಆರೋಪ ಸರಿಯಲ್ಲ. ಅವರ ಬಳಿ ದಾಖಲೆಗಳಿವೆ ಎಂದು ಹೇಳಿದ್ದು, ಕೂಡಲೇ ಬಹಿರಂಗಪಡಿಸಬೇಕು’ ಎಂದು ಕೋರಿದರು.
ಸಂಶಯದ ಬೀಜ ಬಿತ್ತುವುದು ಸರಿಯಲ್ಲ. ದಾಖಲೆಯನ್ನು ಬಹಿರಂಗಪಡಿಸಿ, ಆಪಾದನೆಗೊಳಗಾದ ವ್ಯಕ್ತಿಗೆ ಸಮರ್ಥನೆ ಮಾಡುವ ಅಥವಾ ನಿರಾಕರಿಸುವ ಅವಕಾಶ ಕಲ್ಪಿಸಬೇಕು. ಈ ಮನೆಯ ಸದಸ್ಯರ ವಿರುದ್ಧ ಆಧಾರ ರಹಿತ ಆರೋಪ, ಆಕ್ಷಮ್ಯ ಎಂದು ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.
ಈ ಗದ್ದಲದ ಮಧ್ಯೆಯೇ ಎದ್ದುನಿಂತ ಎ.ಎಸ್.ಪಾಟೀಲ ನಡಹಳ್ಳಿ, ಅಪಹರಣ ಪ್ರಕರಣದ ಮೂಲ ಸೂತ್ರದಾರ ಬಜರಂಗ ದಳದ ಮುಖಂಡ ಖಾಂಡ್ಯ ಪ್ರವೀಣ್, ಪವನ್ ಕುಮಾರ್ ಸೇರಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದರೆ ಮಾಜಿ ಸಚಿವರ ಪಾತ್ರ ಗೊತ್ತಾಗಲಿದೆ ಎಂದರು. ಇದರಿಂದ ಮತ್ತಷ್ಟು ಕೆರಳಿದ ಬಿಜೆಪಿ ಸದಸ್ಯರು, ಆಡಳಿತ ಪಕ್ಷದ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೀರೋ ಆಗಲಿಕ್ಕೆ..ನಡಹಳ್ಳಿ ಅವರು ಹೀರೋ ಆಗಲಿಕ್ಕೆ ಯಾವುದೇ ದಾಖಲೆಗಳಿಲ್ಲದೆ ಆರೋಪ ಮಾಡಿದ್ದು, ಅವರು ಸೂಕ್ತ ದಾಖಲೆಗಳನ್ನು ನೀಡಬೇಕು. ಇಲ್ಲವಾದರೆ ಅವರು ತೆಪ್ಪಗೆ ಕೂರಬೇಕು. ಅಲ್ಲದೆ, ತಮ್ಮ ಹೇಳಿಕೆಗೆ ಹಿಂಪಡೆದು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.
ಕೂಡಲೇ ಮಧ್ಯ ಪ್ರವೇಶಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ, ಆರೋಪ ಸಂಬಂಧ ಅಗತ್ಯ ದಾಖಲೆಗಳಿದ್ದರೆ ನೀಡಿ ಎಂದು ನಡಹಳ್ಳಿಗೆ ಸೂಚಿಸಿದರು. ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ‘ಮಾಜಿ ಸಚಿವ ಹಾಗೂ ಹಾಲಿ ಶಾಸಕರ ಕೈವಾಡ’ ಎಂಬ ಪದವನ್ನು ಕಡತದಿಂದ ತೆಗೆದು ಹಾಕುವಂತೆ ರೂಲಿಂಗ್ ನೀಡಿದರು.
ಚಿಕ್ಕಮಗಳೂರಿನ ಡಿವೈಎಸ್ಪಿ ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆಯನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ಮಾನವೀಯತೆ ದೃಷ್ಟಿಯಿಂದ ಆತನ ಪತ್ನಿಗೆ ಸರಕಾರಿ ಉದ್ಯೋಗ ಹಾಗೂ ಅಗತ್ಯ ನೆರವು ನೀಡುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’
-ಸಿದ್ದರಾಮಯ್ಯ ಮುಖ್ಯಮಂತ್ರಿ