ಸಾಮ್ರಾಜ್ಯ ಶಾಹಿಗಳಿಂದ ಅಸ್ಪಶ್ಯ ತೆ ಹೆಚ್ಚಳ: ವೀರಭದ್ರ ಚನ್ನಮಲ್ಲ ಸ್ವಾಮೀಜಿ
ಬೆಂಗಳೂರು, ಜು.17: ಸಾಮ್ರಾಜ್ಯಶಾಹಿ ಕಾಲಘಟ್ಟದಲ್ಲಿ ಎಲ್ಲ ಬಡವರನ್ನೂ ಅಸ್ಪಶ್ಯರನ್ನಾಗಿ ಮಾಡಲಾಗುತ್ತಿದ್ದು, ಈ ಅಸ್ಪಶ್ಯತೆಯನ್ನು ಹೋಗಲಾಡಿಸಲು ಎಲ್ಲರೂ ಒಟ್ಟಾಗಿ ಹೊಸ ಚಿಂತನೆಗಳನ್ನು ರೂಪಿಸಬೇಕಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ಜ್ಯೋತಿಬಸು ಭವನದಲ್ಲಿ ದಲಿತ ಹಕ್ಕುಗಳ ಸಮಿತಿ ಆಯೋಜಿಸಿದ್ದ ‘ಎಸ್‌ಸಿಎಸ್ಪಿ ಮತ್ತು ಟಿಎಸ್ಪಿ’ ಸಮರ್ಪಕ ಜಾರಿಗಾಗಿ ಬೆಂಗಳೂರು ದಕ್ಷಿಣ ಜಿಲ್ಲಾ ಸಮಾವೇಶ ಹಾಗೂ ಪ್ರತಿನಿಧಿಗಳ ಅಧಿವೇಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸನಾತನ ಮನಸ್ಸುಗಳು ಸಮಾನತೆಯನ್ನು ವಿರೋಧಿಸಿ ಬಡವರೆಲ್ಲರನ್ನೂ ಅಸ್ಪಶ್ಯರನ್ನಾಗಿ ಮಾಡಲು ಯತ್ನಿಸುತ್ತಿವೆ. ಈ ಅಸ್ಪಶ್ಯತೆಯನ್ನು ಹೋಗಲಾಡಿಸಲು ನಾವೆಲ್ಲರೂ ಒಟ್ಟಾಗಿ ಹೊಸ ಚಿಂತನೆಗಳನ್ನು ರೂಪಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ದಲಿತ ವರ್ಗ ಮತ್ತು ಶೂದ್ರ ವರ್ಗಗಳ ಬೇರುಗಳು ಒಂದೇ ಆಗಿದ್ದು, ಈ ಎರಡು ವರ್ಗಗಳೂ ಅಸ್ಪಶ್ಯತೆಯನ್ನು ಹೊಗ ಲಾಡಿಸಲು ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡು ಸಾಂಸ್ಕೃತಿಕ ಏಕತೆಯನ್ನು ಮೂಡಿಸಬೇಕಾಗಿದೆ ಎಂದು ಸಲಹೆ ನೀಡಿದರು.
ದಲಿತ ಮುಖಂಡರು, ರಾಜಕೀಯ ನಾಯಕರುಗಳ ಸ್ವಾರ್ಥ ಕ್ಕೆ ದಲಿತ ಸಮುದಾಯಗಳು ಹಾಳಾಗುತ್ತಿದ್ದು, ಇದರಿಂದ, ಸಾಮಾಜಿಕನ್ಯಾಯ, ಆರ್ಥಿಕ ನ್ಯಾಯ, ಶೈಕ್ಷಣಿಕ ನ್ಯಾಯಗಳು ಎಸ್ಸಿ, ಎಸ್ಟಿ ಹಾಗೂ ಹಿಂದುಳಿದವರಿಗೆ ಸಿಗುತ್ತಿಲ್ಲ. ಹಾಗೂ ಮಧ್ಯಮ ವರ್ಗ ಗಳು ಮೇಲ್ಜಾತಿಯವರ ವಶದಲ್ಲಿವೆ ಎಂದು ಆಪಾದಿಸಿದರು. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಸೇರಿದಂತೆ ಇನ್ನಿತರ ನಾಯಕರು ಸಮಾನತೆಗಾಗಿ ಹೋರಾಟ ನಡೆಸಿದರೂ ಆ ಹೋರಾಟಕ್ಕೆ ಇನ್ನೂ ಪ್ರತಿಫಲ ಸಿಕ್ಕಿಲ್ಲ ಎಂದ ಅವರು, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಪ್ರಬಲವಾಗುತ್ತಲೇ ನಾವು ಗಳು ಜಾತಿಯನ್ನು ದುರ್ಬಲಗೊಳಿಸಬೇಕಾಗಿದೆ ಎಂದು ಹೇಳಿದರು. ಮೇಲ್ಜಾತಿಗಳು ತಳ ಸಮುದಾಯಗಳ ಜಾತಿಗಳನ್ನು ಒಡೆಯುತ್ತಲೇ ಸಮಾನ ಜಾತಿಗಳನ್ನು ಹುಡುಕುತ್ತಿರುತ್ತವೆ. ಆದರೆ, ದಲಿತರು ಒಂದುಗೂಡುತ್ತಲೇ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಬೆಳೆಯಬೇಕಾಗಿದೆ. ಹಾಗೆಂದ ಮಾತ್ರಕ್ಕೆ ಜಾತಿಯೇ ನಮಗೆ ಮುಖ್ಯವೂ ಆಗುವುದಿಲ್ಲ ಎಂದು ತಿಳಿಸಿದರು.
ಕಾಯ್ದೆ ಜಾರಿಯಾಗಲಿ: ಮೂಢ ನಂಬಿಕೆಗಳನ್ನು ಹೊಗಲಾ ಡಿಸಲು ವೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೆ ತರಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ಉಪ ಸಮಿತಿಯನ್ನು ರಚಿಸಿದ್ದಾರೆ. ಆದರೆ, ಸಚಿವರಾದ ಎಚ್.ಆಂಜನೇಯ, ಮಹದೇವಪ್ರಸಾದ್, ಟಿ.ಬಿ.ಜಯಚಂದ್ರ, ಮಾಜಿ ಸಚಿವ ಸತೀಶ್ ಜಾರಕಿಹೋಳಿ ಸೇರಿ ಇನ್ನಿತರ ಸಚಿವರು ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಒಲವು ತೋರಿಸಿದರೆ, ಸಚಿವ ಡಿ.ಕೆ.ಶಿವಕುಮಾರ್ ಅವರಂತಹ ಸಚಿವರು ಈ ಕಾಯ್ದೆಯನ್ನು ಜಾರಿಗೆ ತಂದರೆ ಕಾಂಗ್ರೆಸ್ ಮತ ಬ್ಯಾಂಕ್‌ಗೆ ಹೊಡೆತ ಬೀಳುತ್ತದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.
ಈ ಕಾಯ್ದೆಯನ್ನು ಜಾರಿಗೆ ತಂದರೆ ನರಬಲಿ, ಪ್ರಾಣಿ ಬಲಿ, ಮಾಟಮಂತ್ರದಂತಹ ಕೃತ್ಯಗಳನ್ನು ತಡೆಗಟ್ಟಲು ಸಾಧ್ಯವಾ ಗುತ್ತದೆ. ಇದರಿಂದ, ಬಡವರು ಮತ್ತು ಕೆಳ ಸಮುದಾಯಗಳು ಅಭಿವೃದ್ಧಿ ಯಾಗಲು ಸಾಧ್ಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಸರಕಾರಗಳು ದುರ್ಬಲವಾಗುತ್ತಿದ್ದು, ಖಾಸಗಿ ಕಂಪೆನಿಗಳೇ ಸರಕಾರಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿವೆ. ಅಲ್ಲದೆ, ಸರಕಾರಿ ಉದ್ಯೋಗಗಳ ಒಳ ಮೀಸಲಾತಿಗಿಂತಲೂ ಖಾಸಗಿ ಕಂಪೆನಿಗಳಲ್ಲಿ ಮೀಸಲಾತಿ ಅಳವಡಿಸುವಂತೆ ಒತ್ತಾಯಿಸಿ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು. ಜು.24ರಂದು ವೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೆ ಸಂಬಂಧಿಸಿದ ಆಗು ಹೋಗುಗಳ ಬಗ್ಗೆ ಬೆಳಗ್ಗೆ 10ಗಂಟೆಗೆ ನಿಡುಮಾಮಿಡಿ ಮಠದಲ್ಲಿ ಸಭೆ ಕರೆಯಲಾಗಿದ್ದು, ಆ ಸಭೆಗೆ ಚಿಂತಕರು, ಸಾಹಿತಿಗಳು ಹಾಗೂ ಪ್ರಗತಿಪರರು ಬರಲಿದ್ದಾರೆ ಎಂದು ಹೇಳಿದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಿ.ರಾಜಶೇಖರ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಜ್ಯ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ನಿತ್ಯಾನಂದಸ್ವಾಮಿ, ಸಮುದಾಯದ ಪ್ರಧಾನ ಕಾರ್ಯದರ್ಶಿ ಬಿ.ಸುರೇಂದ್ರರಾವ್, ಡಿಎಚ್‌ಎಸ್ ಜಿಲ್ಲಾ ಮುಖಂಡ ಪಿ.ನಾಗರಾಜ್, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಲಕ್ಷ್ಮಣಕುಮಾರ್, ದಲಿತ ಹಕ್ಕುಗಳ ಸಮಿತಿ ಸಂಚಾಲಕ ಡಿ.ಮಹಾದೇಶ್, ದಲಿತ ಹಕ್ಕುಗಳ ಸಮಿತಿ ಸದಸ್ಯ ಲಿಂಗರಾಜ್, ಜಿಲ್ಲಾ ಮುಖಂಡೆ ವನಜಾ ಮತ್ತಿತರರು ಉಪಸ್ಥಿತರಿದ್ದರು.