×
Ad

ಕಾಯ್ದೆಗಳಿಂದ ವೌಢ್ಯ ಬದಲಾವಣೆ ಅಸಾಧ್ಯ: ಜಮಾದಾರ್

Update: 2016-07-18 00:05 IST

ಬೆಂಗಳೂರು, ಜು.17:ಕಾಯ್ದೆಗಳಿಂದಲೇ ಬದಲಾವಣೆ ತರುತ್ತೇವೆ ಎನ್ನುವುದು ಕನಸಿನ ಮಾತು. ಮೂಢನಂಬಿಕೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿದರೆ ಮಾತ್ರ ಬದಲಾವಣೆ ಸಾಧ್ಯ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ. ಜಮಾದಾರ್ ಹೇಳಿದ್ದಾರೆ.

ರವಿವಾರ ನಗರದ ಕರ್ನಾಟಕ ಸಾಹಿತ್ಯ ಪರಿಷತ್ತು ವಿಜಯನಗರದ ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ಮೂಢನಂಬಿಕೆ ನಿಷೇಧ ಮಸೂದೆಯ ಸ್ವರೂಪ ಚಿಂತನ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮೌಢ್ಯ ಪ್ರತಿಬಂಧಕ ಮಸೂದೆಗೆ ಇನ್ನೂ ಅನೇಕ ಅಂಶಗಳನ್ನು ಸೇರಿಸಬೇಕಿದೆ. ಪಾದಪೂಜೆ ನಿಷೇಧಕ್ಕೆ ಲಿಂಗಾ ಯತ ಮಠಗಳು, ಮಡೆಸ್ನಾನ ಹಾಗೂ ಎಡೆಸ್ನಾನ ನಿಷೇಧಕ್ಕೆ ಮಧ್ವ ಮಠಗಳು ವಿರೋಧ ವ್ಯಕ್ತಪಡಿಸುತ್ತಿವೆ. ಹೀಗಾಗಿ ಕೆಲವು ಅಂಶಗಳನ್ನು ಮಸೂದೆಗೆ ಸೇರಿಸಲು ಸರಕಾರ ಹಿಂದೇಟು ಹಾಕುತ್ತಿದೆ ಎಂದರು.

ರಾಹುಕಾಲ, ಗುಳಿಕಕಾಲ, ಯಮಗಂಡಕಾಲ ನೋಡಿ ಸರಕಾರಿ ಕಟ್ಟಡಗಳ ಶಂಕು ಸ್ಥಾಪನೆ, ಉದ್ಘಾಟನೆ ಮಾಡಲಾಗುತ್ತಿದೆ. ವಾಸ್ತು ಸರಿ ಇಲ್ಲವೆಂದು ಮುಖ್ಯಮಂತ್ರಿ ನಿವಾಸವನ್ನು ಈವರೆಗೆ 11 ಬಾರಿ ರಿಪೇರಿ ಮಾಡಲಾಗಿದೆ. ವಾಸ್ತು, ಭವಿಷ್ಯವನ್ನು ನಂಬುವ ರಾಜಕಾರಣಿಗಳು ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವರೇ ಎನ್ನುವ ಅನುಮಾನ ಕಾಡುತ್ತದೆ ಎಂದು ಹೇಳಿದರು. ಎಲ್ಲ ನಂಬಿಕೆಗಳನ್ನು ಮೂಢನಂಬಿಕೆಗಳು ಎನ್ನಲು ಸಾಧ್ಯವಿಲ್ಲ. ಕೆಲವು ವಿಷಯಗಳಲ್ಲಿ ಇನ್ನೂ ವೈಜ್ಞಾನಿಕ ಅಧ್ಯಯನ ನಡೆದಿಲ್ಲ. ಯೋಗ ಬರೀ ಬಂಡಲ್ ಎಂದೇ ತಿಳಿದಿದ್ದರು. ಆದರೆ, ಯೋಗದಿಂದ ಅನೇಕ ರೋಗಗಳನ್ನು ತಡೆಗಟ್ಟಬಹುದು ಎಂನ್ನುವುದು ಸಾಬೀತಾಗಿದೆ. ಹೀಗಾಗಿ ಕೆಲವು ನಂಬಿಕೆ, ಆಚರಣೆಗಳಲ್ಲಿ ಅಡಗಿರುವ ಸತ್ಯವನ್ನು ಪತ್ತೆ ಮಾಡಬೇಕು ಎಂದರು.

ಸಾಹಿತಿ ಜಿ. ರಾಮಕಷ್ಣ ಮಾತನಾಡಿ, ಹಿಂದೂ ಧರ್ಮವನ್ನು ಗುರಿಯಾಗಿಸಿ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಯಾವುದೇ ಒಂದು ಧರ್ಮದ ವಿರುದ್ಧ ರೂಪಿಸಿರುವ ಮಸೂದೆ ಇದಲ್ಲ. ರಾಷ್ಟ್ರೀಯ ಕಾನೂನು ಶಾಲೆ ರೂಪಿಸಿರುವ ಕರಡು ಮಸೂದೆಯ ಪ್ರಸ್ತಾವನೆಯಲ್ಲಿ, ಹಿಂಸೆ ಪ್ರತಿಪಾದಿಸುವ, ಒಬ್ಬರ ಆಚರಣೆಯಿಂದ ಇನ್ನೊಬ್ಬರಿಗೆ ದೈಹಿಕ ಅಥವಾ ಮಾನಸಿಕವಾಗಿ ನೋವಾಗುವ ಹಾಗೂ ಮಾನವನ ಘನತೆಗೆ ಚ್ಯುತಿ ಬರುವ ಆಚರಣೆಗಳನ್ನು ನಿಷೇಧಿಸಬೇಕು ಎಂದು ಹೇಳಲಾಗಿದೆ ಎಂದರು.

 ಪೇಜಾವರ ಸ್ವಾಮೀಜಿ ಉರುಳಾಡಲಿ: ಎಂಜಲು ಎಲೆಯ ಮೇಲೆ ಕೆಳವರ್ಗ ಮತ್ತು ದಲಿತರು ಉರುಳಾಡಿದರೆ ಅವರಿಗೆ ಯಾವುದೇ ರೋಗ ರುಜಿನಗಳು ಬರುವುದಿಲ್ಲ ಎನ್ನಲಾಗುತ್ತದೆ. ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಕಾಯಿಲೆ ಬರುತ್ತದೆ. ಅವರೂ ಎಂಜಲು ಎಲೆಯ ಮೇಲೆ ಉರುಳಾಡಿ ರೋಗ ಬರದಂತೆ ನೋಡಿಕೊಳ್ಳಬಹುದಲ್ಲವೇ ಎಂದು ರಾಮಕೃಷ್ಣ ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News