ಯುವಶಕ್ತಿ ದೇಶದ ಬಹುದೊಡ್ಡ ಆಸ್ತಿ: ಸಚಿವ ದೇಶಪಾಂಡೆ
ಭಟ್ಕಳ, ಜು.17: ಭಾರತದಲ್ಲಿ ಸಂಪನ್ಮೂಲ, ಯುವ ಶಕ್ತಿ, ದೇಶದ ಬಹುದೊಡ್ಡ ಆಸ್ತಿಯಾಗಿದೆ. ಉಳಿದ ದೇಶಗಳಲ್ಲಿ ನಾವು ಹೆಚ್ಚು ಹೆಚ್ಚು ಅಶಕ್ತರನ್ನು ಕಂಡರೆ ಭಾರತದಲ್ಲಿ ಶೇ. 55ರಷ್ಟು ಯುವ ಶಕ್ತಿಯನ್ನು ನೋಡಬಹುದು. ಯುವಕರಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರಿಗೆ ಉತ್ತಮ ಮಾರ್ಗದರ್ಶನ ದ ಜೊತೆಗೆ ಸಚ್ಚಾರಿತ್ರ್ಯವಂತರಾಗಿ ದೇಶಪ್ರೇಮವನ್ನು ಬೆಳೆಸುವ ಕೆಲಸ ಹಿರಿಯ ನಾಗರಿಕರ ಕರ್ತವ್ಯ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದರು.
ಇಲ್ಲಿನ ಪ್ರತಿಷ್ಠಿತ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಇದರ ಜುಕಾಕೋ ಶಂಸುದ್ದೀನ್ ಸ್ಮರಣಾರ್ಥ ಆಡಳಿತ ಕಟ್ಟಡ ಹಾಗೂ ಎಸ್.ಎಂ. ಯಾಹ್ಯಾ ಮೆಮೋರಿಯಲ್ ಸ್ನಾತಕೋತ್ತರ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಅಂಜುಮಾನ್ ಸಂಸ್ಥೆ ಅತ್ಯಂತ ಉತ್ತಮವಾಗಿ ಬೆಳೆದು ಬಂದಿದ್ದು, ಇದಕ್ಕೆ ಕಾರಣ ಇದರ ಹಿಂದಿರುವ ವ್ಯಕ್ತಿಗಳು ಮತ್ತು ಶಕ್ತಿಗಳು. ಅವರಲ್ಲಿ ಜುಕಾಕೋ ಶಂಸುದ್ದೀನ್ ಹಾಗೂ ಎಸ್. ಎಂ. ಯಾಹ್ಯಾ ಕೂಡಾ ಸೇರಿದ್ದಾರೆ. ತಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದ ಶಂಸುದ್ದೀನ್‌ಅತ್ಯಂತ ಸರಳ ವ್ಯಕ್ತಿತ್ವದ ಉತ್ತಮ ವ್ಯಕ್ತಿಯಾಗಿದ್ದರು ಎಂದರು. ಅಂಜುಮಾನ್ ಸಂಸ್ಥೆಯಲ್ಲಿ 14 ಸಾವಿರಕ್ಕೂ ಹೆಚ್ಚು ಜನರು ತರಬೇತಿ ಪಡೆದಿದ್ದು, ಅವರಲ್ಲಿ 8-9 ಸಾವಿರ ಜನರು ಸ್ವಉದ್ಯೋಗ ವನ್ನು ಮಾಡುತ್ತಿದ್ದಾರೆ. ಅಂಜುಮಾನ್ ಸಂಸ್ಥೆಗೆ ಬೃಹತ್ ಕಟ್ಟಡ ನಿರ್ಮಿಸಿಕೊಟ್ಟ ಜುಕಾಕೊ ಶಂಸುದ್ದೀನ್ ಅವರ ಕುಟುಂಭಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮಾನ್ ಸಂಸ್ಥೆಯ ಅಧ್ಯಕ್ಷ ಜುಕಾಕೊ ಅಬ್ದುಲ್ ರಹೀಮ್ ವಹಿಸಿದ್ದರು. ಕಾರ್ಯ ಕ್ರಮದಲ್ಲಿ ಜುಕಾಕೋ ಶಂಸುದ್ದೀನ್ ಅವರ ಕುರಿತು ಪತ್ರಕರ್ತ ಅಫ್ತಾಬ್ ಹುಸೈನ್ ಕೋಲಾ ಅವರು ಸಂಪಾದಿಸಿ, ತಂಝೀಮ್ ಸಂಸ್ಥೆಯ ವತಿಯಿಂದ ಪ್ರಕಟಿಸಿದ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ರಾಜ್ಯ ಸಂಬಾರು ಮಂಡಳಿಯ ಅಧ್ಯಕ್ಷ ಹಾಗೂ ತಂಝೀಮ್ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಮುಝಮ್ಮಿಲ್ ಖಾಝಿಯಾ, ಭಟ್ಕಳಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹನೀಯರ ಕುರಿತು ಅಧ್ಯಯನ ನಡೆಸಿ ತಂಝೀಮ್ ಸಂಸ್ಥೆಯ ಮೂಲಕ ಪುಸ್ತಕಗಳನ್ನು ಹೊರತರುವ ಬಗ್ಗೆ ಚಿಂತಿಸಲಾಗಿದೆ ಎಂದರು.
ಐರ್ಲೆಂಡ್ ಯುನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪಡೆದ ಭಟ್ಕಳದ ಡಾ. ಸೈಯದ್ ಖಲೀಲುರ್ರಹ್ಮಾನ್ ಅವರನ್ನು ಇದೇ ವೇಳೆ ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರು ಸಿಟಿ ಜಾಮಿಯಾ ಮಸೀದಿಯ ಇಮಾಮ್ ವೌಲಾನಾ ಮಸೂದ್ ಇಮ್ರಾನ್, ಜೋಧ್‌ಪುರದ ಎಂ.ಎಂ.ಇ.ಡಬ್ಲು.ಎಸ್.ನ ಪ್ರಧಾನ ವ್ಯವಸ್ಥಾಪಕ ಮುಹಮ್ಮದ್‌ಅತೀಕ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಾಸಕ ಮಂಕಾಳ ಎಸ್. ವೈದ್ಯ, ಉತ್ತರ ಕನ್ನಡ ಜಿಲ್ಲಾಧಿಕಾರಿ ನಕುಲ್, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯೀಲ್ ಮುಂತಾದವರು ಉಪಸ್ಥಿತರಿದ್ದರು. ಡಾ. ಸೈಯದ್‌ಜುಕಾಕೊ ಹಾಗೂ ಜುಕಾಕೋ ಫಝಲ್ ಶಂಸುದ್ದೀನ್ ಜುಕಾಕೋ ಹಾಗೂ ಎಸ್.ಎಂ. ಯಾಹ್ಯಾರವರಕುರಿತು ಮಾತನಾಡಿದರು. ಎಸ್.ಎಂ. ಅಬ್ದುಲ್‌ರಹ್ಮಾನ್ ಬಾತಿನ್‌ಜುಕಾಕೋ ಶಂಸುದ್ದೀನ್ ಕುರಿತು ಕವನ ವಾಚಿಸಿದರು. ಅಂಜುಮಾನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ಅನ್ಸಾರ್ ಕಾಶಿಂಜಿ ಸ್ವಾಗತಿಸಿದರು.ಅಫ್ತಾಬ್ ಹುಸೈನ್ ಕೋಲಾ ಕಾರ್ಯಕ್ರಮ ನಿರ್ವಹಿಸಿದರು.