×
Ad

ನಿಪ್ಷಕ್ಷಪಾತ ತನಿಖೆ ದೃಷ್ಟಿಯಿಂದ ರಾಜೀನಾಮೆ: ಜಾರ್ಜ್ ಸ್ಪಷ್ಟಣೆ

Update: 2016-07-18 20:00 IST

ಬೆಂಗಳೂರು, ಜು. 18: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ತನ್ನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಮಡಿಕೇರಿ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕೆಂದು ಸ್ವಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ದಿಢೀರ್ ಬೆಳವಣಿಗೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನ್ಯಾಯಾಲಯದ ಆದೇಶಕ್ಕೆ ತಾನು ತಲೆಬಾಗುವೆ. ನಿರಾಪರಾಧಿಯಾಗಿ ಹೊರಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಣಪತಿ ಪತ್ನಿ ಪಾವನಾ ಹಾಗೂ ಅವರ ಪುತ್ರ ನೇಹಾಲ್ ಎಫ್‌ಐಆರ್ ಸಲ್ಲಿಸುವಂತೆ ಕೋರಿದ್ದು, ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶ ನೀಡಿದೆ. ನ್ಯಾಯಾಂಗದ ಆದೇಶಕ್ಕೆ ತಲೆಬಾಗುವೆ. ಅಧಿಕಾರಕ್ಕೆ ನಾನೆಂದು ಅಂಟಿಕೊಂಡಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಣೆ ನೀಡಿದರು.
ತನ್ನ 45 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಯಾರೊಬ್ಬರಿಗೂ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಗಣಪತಿ ಆತ್ಮಹತ್ಯೆ ಪ್ರಕರಣದಲ್ಲೂ ತಾನು ಕಿರುಕುಳ ನೀಡಿಲ್ಲ. ಆದರೂ, ತನ್ನ ವಿರುದ್ಧ ಆರೋಪ ಬಂದ ಹಿನ್ನೆಲೆಯಲ್ಲಿ ತನಿಖೆ ದೃಷ್ಟಿಯಿಂದ ರಾಜೀನಾಮೆ ಸಲ್ಲಿಸಿದ್ದು, ಆ ರಾಜೀನಾಮೆ ಅಂಗೀಕರಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಬಿಟ್ಟದ್ದು ಎಂದು ಜಾರ್ಜ್ ಹೇಳಿದರು.
ನನ್ನ ವಿರುದ್ಧ ನ್ಯಾಯಾಲಯ ತನಿಖೆಗೆ ಆದೇಶಿಸಿಲ್ಲ. ಬದಲಿಗೆ ಎಫ್‌ಐಆರ್ ದಾಖಲಿಸಲು ಆದೇಶ ನೀಡಿದೆ ಎಂದ ಜಾರ್ಜ್, ತಾನು ನಿರಪರಾಧಿಯಾಗಿ ಹೊರಬರುವ ವಿಶ್ವಾಸವಿದೆ. ಆದರೆ, ಅದಕ್ಕೂ ಮೊದಲೆ ‘ತನ್ನನ್ನು ಅಪರಾಧಿ’ ಎಂದು ಮಾಧ್ಯಮಗಳು, ವಿಪಕ್ಷಗಳು ಹಾಗೂ ಸಾರ್ವಜನಿಕರು ಭಾವಿಸಬಾರದು ಎಂದು ಮನವಿ ಮಾಡಿದರು.

ಕಡ್ಡಾಯ ರಜೆ
ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಸ್ಥಾನದಲ್ಲಿರುವ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೋಹಂತಿ ಮತ್ತು ಎ.ಎಂ.ಪ್ರಸಾದ್ ಅವರಿಗೆ ಕಡ್ಡಾಯ ರಜೆ ಮೇಲೆ ತೆರಳುವಂತೆ ಸೂಚಿಸಲಾಗಿದೆ. ಇಬ್ಬರು ಅಧಿಕಾರಿಗಳ ವಿರುದ್ಧ ನ್ಯಾಯಾಲಯ ಎಫ್‌ಐಆರ್ ದಾಖಲಿಸಲು ಆದೇಶಿಸಿದ ಹಿನ್ನೆಲೆಯಲ್ಲಿ ಆ ಇಬ್ಬರು ಅಧಿಕಾರಿಗಳು ರಜೆಯ ಮೇಲೆ ತೆರಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News