ಟ್ರಂಪ್‌ರನ್ನು ಶ್ವೇತಭವನಕ್ಕೆ ಕಳುಹಿಸಲು ಪುಟಿನ್ ಯೋಜನೆ ರೂಪಿಸಿದ್ದಾರೆಯೇ?

Update: 2016-07-27 11:31 GMT

►ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ವಿಜಯಿಯಾಗಲಿ ಎಂದು ಆಶಿಸಲು ರಶ್ಯಕ್ಕೆ ಹಲವು ಕಾರಣಗಳಿವೆ.

►ನ್ಯಾಟೊವನ್ನು ದುರ್ಬಲಗೊಳಿಸಲು ರಶ್ಯ ಬಯಸಿದೆ.

►ನ್ಯಾಟೊದ ನೂತನ ಸದಸ್ಯರಾದ ಬಾಲ್ಟಿಕ್ ದೇಶಗಳನ್ನು ಅಮೆರಿಕ ರಕ್ಷಿಸಲಾರದು ಎಂದು ಟ್ರಂಪ್ ಹೇಳಿದ್ದಾರೆ.

►ಪುಟಿನ್ ಓರ್ವ ಶಕ್ತಿಶಾಲಿ ಹಾಗೂ ದೃಢ ನಿರ್ಧಾರದ ಮನುಷ್ಯ ಎಂಬುದಾಗಿ ಟ್ರಂಪ್ ಹೊಗಳಿದ್ದಾರೆ.

ವಾಶಿಂಗ್ಟನ್, ಜು. 27: 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಪ್ರಚಾರ ಈಗಾಗಲೇ ಹಿಂದಿನ ಎಲ್ಲ ದಾಖಲೆಗಳನ್ನು ಮೀರಿ ಮುಂದೆ ಸಾಗಿದೆ. ಈಗ ಅದಕ್ಕೆ ಇನ್ನೊಂದು ವೈಶಿಷ್ಟ ಸೇರಿಕೊಂಡಿದೆ. ಅಮೆರಿಕದ ಪ್ರಮುಖ ಜಾಗತಿಕ ಎದುರಾಳಿ ದೇಶವೊಂದರೊಂದಿಗೆ ತನ್ನ ಎದುರಾಳಿ ಅಭ್ಯರ್ಥಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬುದಾಗಿ ಇನ್ನೊಂದು ಅಭ್ಯರ್ಥಿಯ ಪ್ರಚಾರ ಬಣ ಆರೋಪಿಸಿದೆ. ಅಂದರೆ, ರಶ್ಯದ ಸ್ನೇಹಿತ ಹಾಗೂ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಶ್ವೇತಭವನಕ್ಕೆ ಕಳುಹಿಸುವ ನಿಟ್ಟಿನಲ್ಲಿ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಆರೋಪ.

  ಕಳೆದ ವಾರಾಂತ್ಯದ ಟಿವಿ ವಿಶೇಷ ಕಾರ್ಯಕ್ರಮಗಳಲ್ಲಿ ಹಿಲರಿ ಕ್ಲಿಂಟನ್‌ರ ಪ್ರಚಾರ ಮ್ಯಾನೇಜರ್ ರಾಬೀ ಮೂಕ್ ಅಧಿಕೃತವಾಗಿಯೇ ಈ ಆರೋಪಗಳನ್ನು ಮಾಡಿದರು. ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಇಮೇಲ್‌ಗಳನ್ನು ರಶ್ಯದ ಕನ್ನಗಾರರು (ಹ್ಯಾಕರ್‌ಗಳು) ಸೋರಿಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು. ಹಿಲರಿಯ ಎದುರಾಳಿ ಬರ್ನೀ ಸ್ಯಾಂಡರ್ಸ್‌ರನ್ನು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನ ಮಾಡದಿರಲು ಪಕ್ಷವು ರಹಸ್ಯವಾಗಿ ಕೆಲಸ ಮಾಡುತ್ತಿದೆ ಎನ್ನುವುದನ್ನು ಆ ಇಮೇಲ್ ತೋರಿಸುತ್ತದೆ ಎನ್ನಲಾಗಿದೆ.

ಟ್ರಂಪ್ ರಶ್ಯದೊಂದಿಗೆ ನಂಟು ಹೊಂದಿದ್ದಾರೆ ಎಂಬುದಾಗಿ ಬಹಳ ಹಿಂದೆಯೇ ಶಂಕಿಸಲಾಗಿತ್ತು. ಆದರೆ, ಈ ಸೋರಿಕೆಯ ಹೊತ್ತುಗಾರಿಕೆಯು ಅದನ್ನು ದೃಢಪಡಿಸಿದೆ. ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ರಿಪಬ್ಲಿಕನ್ ಸಮಾವೇಶದ ಬೆನ್ನಿಗೇ ಹಾಗೂ ಈ ವಾರ ಫಿಲಡೆಲ್ಫಿಯದಲ್ಲಿ ನಡೆಯುತ್ತಿರುವ ಡೆಮಾಕ್ರಟಿಕ್ ಪಕ್ಷದ ಸಮಾವೇಶಕ್ಕೆ ಪೂರ್ವಭಾವಿಯಾಗಿ ಆ ಇಮೇಲ್‌ಗಳನ್ನು ಸೋರಿಕೆ ಮಾಡಲಾಗಿತ್ತು.

ಡೆಮಾಕ್ರಟಿಕ್ ಪಕ್ಷದ ಸಮಾವೇಶ ಸೌಹಾರ್ದಯುತ ವಾತಾವರಣದಲ್ಲಿ ನಡೆಯುವುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಸ್ಯಾಂಡರ್ಸ್‌ರ ಬೆಂಬಲಿಗರು ಆಕ್ರೋಶಿತರಾದರು ಹಾಗೂ ಬಂಡಾಯ ಘೋಷಿಸಿದರು. ಅದರ ಒಗ್ಗಟ್ಟಿನ ಪಕ್ಷವೆಂಬ ಹೆಗ್ಗಳಿಕೆ ಮುರಿಯಿತು.

ಇಮೇಲ್ ಸೋರಿಕೆಗೆ ಕಾರಣರಾರು?

ಡೆಮಾಕ್ರಟಿಕ್ ಪಕ್ಷದ ರಾಷ್ಟ್ರೀಯ ಸಮಿತಿಯ ಗುಪ್ತ ಇಮೇಲ್‌ಗಳ ಸೋರಿಕೆಗೆ ಕಾರಣರಾರು? ಪರಿಣತರು ಹೇಳುವಂತೆ, ನೇರವಾಗಿ ಅಥವಾ ಪರೋಕ್ಷವಾಗಿ, ಅದು ರಶ್ಯನ್ನರು ಎನ್ನುವುದು ಬಹುತೇಕ ಖಚಿತ.

ಮೊದಲನೆಯದಾಗಿ, ಯುರೋಪ್‌ನಾದ್ಯಂತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ನಡೆಸಿದ ದೀರ್ಘ ಇತಿಹಾಸ ರಶ್ಯಕ್ಕಿದೆ.

ಜೂನ್ ಮಧ್ಯ ಭಾಗದಲ್ಲಿ ಇಮೇಲ್ ಸೋರಿಕೆ ಬಹಿರಂಗವಾದಾಗ, ರಶ್ಯದ ಏಜಂಟ್‌ಗಳನ್ನು ಪ್ರಮುಖ ಶಂಕಿತರನ್ನಾಗಿ ಗುರುತಿಸಲಾಗಿತ್ತು.

ರಶ್ಯದ ಪ್ರಮುಖ ಜಾಗತಿಕ ರಾಜಕೀಯದ ಗುರಿಯೆಂದರೆ, ನ್ಯಾಟೊವನ್ನು ಒಡೆಯುವುದು ಅಥವಾ ದುರ್ಬಲಗೊಳಿಸುವುದು ಹಾಗೂ ಹಳೆಯ ಸೋವಿಯತ್ ಒಕ್ಕೂಟಕ್ಕೆ ಸೇರಿದ ದೇಶಗಳ ಮೇಲೆ ಮತ್ತೆ ನಿಯಂತ್ರಣ ಸಾಧಿಸುವುದು. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯ ಘೋಷಿತ ನಿಲುವು ಇದಕ್ಕೆ ಪೂರಕವಾಗಿಯೇ ಇದೆ.

ಪುಟಿನ್ ಶಕ್ತಿಶಾಲಿ ಹಾಗೂ ದೃಢ ನಿರ್ಧಾರದ ಮನುಷ್ಯ ಎಂಬುದಾಗಿ ಟ್ರಂಪ್ ಈಗಾಗಲೇ ಹೊಗಳಿದ್ದಾರೆ (ಹಾಗೂ ಇದಕ್ಕೆ ಪ್ರತಿಯಾಗಿ ಪುಟಿನ್‌ರಿಂದ ಶಹಬ್ಬಾಸ್‌ಗಿರಿಯನ್ನೂ ಪಡೆದುಕೊಂಡಿದ್ದಾರೆ).

ಕಳೆದ ವಾರ ‘ನ್ಯೂಯಾರ್ಕ್ ಟೈಮ್ಸ್’ಗೆ ನೀಡಿದ ಸಂದರ್ಶನವೊಂದರಲ್ಲಿ, ನ್ಯಾಟೊದ ನೂತನ ಸದಸ್ಯರಾದ ಬಾಲ್ಟಿಕ್ ದೇಶಗಳು ತಮ್ಮ ಪೂರ್ಣ ಶುಲ್ಕವನ್ನು ಒಕ್ಕೂಟಕ್ಕೆ ನೀಡದಿದ್ದರೆ ಅಮೆರಿಕ ಅವುಗಳ ಬೆಂಬಲಕ್ಕೆ ನಿಲ್ಲಲಾರದು ಎಂಬುದಾಗಿ ಟ್ರಂಪ್ ಹೇಳಿದ್ದರು. ಈ ದೇಶಗಳು ಈಗ ನಿರಂತರವಾಗಿ ರಶ್ಯದಿಂದ ಬೆದರಿಕೆಗೆ ಒಳಗಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News