ನೀರು ಕೇಳಿದ್ದಕ್ಕೆ ಲಾಠಿ ಏಟು
ಬೆಂಗಳೂರು/ಯಮನೂರು ಜು.30: ಮಹಾದಾಯಿ ನ್ಯಾಯಾಧೀಕರಣದ ತೀರ್ಪನ್ನು ಖಂಡಿಸಿ ಪ್ರತಿಭಟನೆ ಮಾಡಿದ ರೈತರನ್ನು ಬಂಧಿಸುವ ನೆಪದಲ್ಲಿ ನವಲಗುಂದ ತಾಲೂಕಿನ ಯಮನೂರಿಗೆ ಗ್ರಾಮಕ್ಕೆ ನುಗ್ಗಿದ ಪೊಲೀಸರು ಮಹಿಳೆಯರನ್ನು, ವೃದ್ಧರನ್ನು ಮನ ಬಂದಂತೆ ಥಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ನವಲಗುಂದ ತಾಲೂಕಿನ ಯಮನೂರಿಗೆ ಏಕಾಏಕಿ ನುಗ್ಗಿದ ನೂರಾರು ಪೊಲೀಸರು ಮನೆ, ಮನೆಗೆ ನುಗ್ಗಿ ವೃದ್ಧರು, ಮಹಿಳೆಯರು ಹಾಗೂ ಮಕ್ಕಳೆನ್ನದೆ ಬೀದಿಗೆ ಎಳೆದೆ ತಂದು ಮನಬಂದಂತೆ ಥಳಿಸಿದರು. ವೃದ್ಧರು ಪರಿಪರಿಯಾಗಿ ಬೇಡಿಕೊಂಡರು ಬಿಡದೆ ಕೈ ಕಾಲು ಮುರಿಯುವಂತೆ ಹೊಡೆದಿದ್ದಾರೆ ಎಂದು ಗ್ರಾಮಾಸ್ಥರು ಆರೋಪಿಸಿದ್ದಾರೆ.
ಬಾಗಿಲು ಮುರಿದ ಪೊಲೀಸರು: ಪೊಲೀಸರ ಬೂಟುಗಳ ಶಬ್ದ ಕೇಳುತ್ತಿದ್ದಂತೆ ಭಯಗೊಂಡ ಮಹಿಳೆಯರು ಮನೆಯ ಬಾಗಿಲು ಹಾಕಿಕೊಂಡಿದ್ದಾರೆ. ಆದರೆ, ಪೊಲೀಸರು ಬಾಗಿಲುಗಳನ್ನು ಮುರಿದು ವೃದ್ಧ ಮಹಿಳೆಯನ್ನು ಮನಬಂದಂತೆ ಥಳಿಸಿದ್ದಾರೆ. ಗ್ರಾಮದ ಸಿದ್ದವ್ವ ಸಾರಾವಾರಿ (70), ಸಾವಿತ್ರಿ ಹಿರೇಮಠ (55), ಕಾಶವ್ವ ಚುಳಕಿ (55) ಎಂಬ ಮಹಿಳೆಯರಿಗೆ ತೀವ್ರವಾದ ಪೆಟ್ಟಾಗಿದೆ.
ಗರ್ಭಿಣಿಯನ್ನು ಬಿಡದ ಪೊಲೀಸರು: ಪ್ರತಿಭಟನೆ ಮಾಡಿದ ರೈತರನ್ನು ಬಂಧಿಸುವ ನೆಪದಲ್ಲಿ ಯಮಲೂರು ಗ್ರಾಮಕ್ಕೆ ನುಗ್ಗಿದ ಪೊಲೀಸರು ಶಿಲ್ಪಾಜಾಲಿಕಟ್ಟಿ ಎಂಬ ಗರ್ಭಿಣಿ ಮಹಿಳೆಯನ್ನು ಥಳಿಸಿ ಗಾಯಗೊಳಿಸಿದ್ದಾರೆ. ಇದರಿಂದಾಗಿ ಭಯಗೊಂಡಿರುವ ಗ್ರಾಮಾಸ್ಥರು ಊರನ್ನು ತೊರೆದಿದ್ದಾರೆ.
ಯಮನೂರು ಗ್ರಾಮಸ್ಥರ ಮೇಲೆ ಪೊಲೀಸರು ನಡೆಸಿರುವ ದೌರ್ಜನ್ಯವನ್ನು ನೋಡಿ ತೀವ್ರ ನೋವುಂಟಾಗಿದೆ. ವೃದ್ಧರು ಮಹಿಳೆಯರು ಎನ್ನದೆ ಮನೆಗೆ ನುಗ್ಗಿ ಪೊಲೀಸರು ಥಳಿಸುತ್ತಿದ್ದಾರೆ. ಇದನ್ನು ನೋಡುತ್ತಿದ್ದರೆ ಕರ್ನಾಟಕ ಬ್ರಿಟಿಷ್ ಆಡಳಿತದಲ್ಲಿದೆಯೆ ಎಂಬ ಅನುಮಾನ ಬರುವಂತಿದೆ. ಅಂತೆಯೇ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್‌ಗೆ ತಮ್ಮ ಸ್ಥಾನದಲ್ಲಿ ಮುಂದುವರೆಯುವಂತಹ ಅರ್ಹತೆಯಿಲ್ಲ.
-ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ
ನವಲುಗುಂದ ತಾಲೂಕಿನ ಯಮಲೂರು ಗ್ರಾಮದ ಕೆಲವು ರೈತರ ಮೇಲೆ ಎಫ್‌ಐಆರ್ ದಾಖಲಾಗಿತ್ತು. ಹೀಗಾಗಿ ಪ್ರಕರಣ ದಾಖಲುಗೊಂಡಿರುವ ರೈತರನ್ನು ಬಂಧಿಸುವುದಕ್ಕಾಗಿ ಪೊಲೀಸರು ಗ್ರಾಮಕ್ಕೆ ಹೋಗಿದ್ದಾರೆ. ಈ ವೇಳೆ ಕೆಲವು ಪೊಲೀಸರು ಗ್ರಾಮಸ್ಥರ ಮೇಲೆ ಅತಿರೇಕವಾಗಿ ವರ್ತಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಓಂ ಪ್ರಕಾಶ್ ರಾಜ್ಯ ಪೊಲೀಸ್ ಮಹಾ ನಿರ್ದೇಶಕ