×
Ad

ಮೈಸೂರು ನ್ಯಾಯಾಲಯದ ಆವರಣದಲ್ಲಿ ನಿಗೂಢ ಸ್ಫೋಟ: ತನಿಖೆ ನಂತರ ವಿವರ: ಗೃಹ ಸಚಿವ ಡಾ.ಜಿ.ಪರಮೇಶ್ವರ್

Update: 2016-08-01 20:01 IST

ಬೆಂಗಳೂರು/ಮೈಸೂರು ಆ.1: ಮೈಸೂರು ನ್ಯಾಯಾಲಯದ ಆವರಣದಲ್ಲಿನ ಶೌಚಾಲಯದ ಬಳಿ ಸಂಭವಿಸಿದ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಲಾಗುತ್ತಿದ್ದು, ಆ ನಂತರವಷ್ಟೇ ಸಂಪೂರ್ಣ ವಿವರ ಲಭ್ಯವಾಗಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

  ಸೋಮವಾರ ಇಲ್ಲಿನ ಮೈಸೂರು ನ್ಯಾಯಾಲಯದ ಆವರಣದಲ್ಲಿ ಸ್ಫೋಟಗೊಂಡ ಸ್ಥಳಕ್ಕೆ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಣ್ಣ ಪ್ರಮಾಣದ ಸ್ಫೋಟವಾದರೂ, ಇದರ ಪರಿಣಾಮ ಹೆಚ್ಚಿದೆ. ಈ ಸಂಬಂಧ ಈಗಾಗಲೇ ಘಟನಾ ಸ್ಥಳದಲ್ಲಿ ಬಾಂಬ್ ನಿಷ್ಕ್ರಿಯ ದಳ ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿ ದೊರೆತ ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

 ಇನ್ನು ಸ್ಫೋಟದಿಂದ ಕೋರ್ಟ್ ಆವರಣದಲ್ಲಿರುವ ಶೌಚಾಲಯದ ಗೋಡೆ ಬಿರುಕುಗೊಂಡಿದ್ದು, ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಸ್ಫೋಟದಿಂದ ಯಾರಿಗೂ ತೊಂದರೆಯಾಗಿಲ್ಲ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದ್ದು, ಯಾವ ಕಾರಣಕ್ಕೆ ಸ್ಫೋಟ ನಡೆದಿದೆ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ತನಿಖೆ ಸಂಪೂರ್ಣಗೊಂಡ ಬಳಿಕ ಮಾಹಿತಿ ನೀಡಲಾಗುವುದೆಂದು ಪರಮೇಶ್ವರ್ ಹೇಳಿದರು.

ಸ್ಫೋಟ ಘಟನೆಗೆ ಯಾರು ಕಾರಣ ಎಂಬುವುದನ್ನು ತನಿಖೆಗೆ ಮೊದಲೇ ಊಹೆ ಮಾಡಲು ಸಾಧ್ಯವಿಲ್ಲ. ತನಿಖೆ ಬಳಿಕ ಸ್ಫೋಟ ಘಟನೆಗೆ ಯಾರು ಕಾರಣರು ಎಂದು ತಿಳಿದು ಬರಲಿದೆ ಎಂದ ಅವರು, ಹೆಚ್ಚಿನ ಅವಘಡ ಸಂಭವಿಸಿಲ್ಲದಿರುವುದೇ ನೆಮ್ಮದಿಯ ಸಂಗತಿ ಎಂದು ತಿಳಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್, ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುರ್ಖಜಿ, ಜಿಲ್ಲಾಧಿಕಾರಿ ಶಿಖಾ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News