ಸರಕಾರಿ ಗೌರವಗಳೊಂದಿಗೆ ಹುತಾತ್ಮ ಯೋಧರ ಅಂತ್ಯಕ್ರಿಯೆ
ಹುಬ್ಬಳ್ಳಿ/ಬೆಳಗಾವಿ, ಆ.1: ಜಮ್ಮು-ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ನೆಲಬಾಂಬ್ ಸ್ಫೋಟದಿಂದ ಜು.29ರಂದು ವೀರಮರಣವನ್ನಪ್ಪಿದ್ದ ರಾಜ್ಯದ ಇಬ್ಬರು ಹುತಾತ್ಮ ಯೋಧರರಾದ ಧಾರವಾಡದ ಹಸನ್‌ಸಾಬ್ ಖುದಾವಂದ(25) ಹಾಗೂ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬಸವರಾಜ ಚನ್ನಪ್ಪ ಪಾಟೀಲ್(48) ಅವರ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಇಬ್ಬರು ವೀರ ಯೋಧರ ಪಾರ್ಥಿವ ಶರೀರವನ್ನು ಜಮ್ಮು ಕಾಶ್ಮೀರದಿಂದ ಗೋವಾ ವಿಮಾನ ನಿಲ್ದಾಣಕ್ಕೆ ತರಲಾಯಿತು. ಆನಂತರ, ಅಲ್ಲಿಂದ ಸೇನೆಯ ವಿಶೇಷ ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಂತಹ ಪಾರ್ಥಿವ ಶರೀರಗಳನ್ನು ಅವರವರ ಸ್ವಗ್ರಾಮಗಳಿಗೆ ಕೊಂಡೊಯ್ಯಲಾಯಿತು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೈದಾಪುರ ಗ್ರಾಮದ ಯೋಧ ಹಸನ್‌ಸಾಬ್ ಖುದಾವಂದ ಪಾರ್ಥಿವ ಶರೀರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಬಂಧುಗಳ ಆಕ್ರಂದನ ಮುಗಿಲುಮುಟ್ಟಿತ್ತು. ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿತ್ತು.
ಇತ್ತೀಚೆಗಷ್ಟೆ ತನ್ನ ಸಹೋದರಿಯ ವಿವಾಹ ಮಾಡಿದ್ದ ಅವರು, ಮೊಹರಂ ಹಬ್ಬದ ಸಂದರ್ಭದಲ್ಲಿ ರಜೆ ಹಾಕಿ ಮನೆಗೆ ಬರುವುದಾಗಿ ಹೇಳಿದ್ದನ್ನು ಸ್ಮರಿಸಿಕೊಂಡು ಕುಟುಂಬ ಸದಸ್ಯರು ಕಣ್ಣೀರು ಹಾಕಿದ್ದಾರೆ. ಹುತಾತ್ಮ ಯೋಧನ ಅಂತಿಮ ದರ್ಶನಕ್ಕೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತವು ಸಕಲ ಸಿದ್ಧತೆಗಳನ್ನು ಮಾಡಿತ್ತು. ಗ್ರಾಮಸ್ಥರು, ಶಾಲಾ ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಯೋಧನಿಗೆ ಅಂತಿಮ ನಮನ ಸಲ್ಲಿಸಿದರು.
ಹಸನ್‌ಸಾಬ್ ಖುದಾವಂದ್ ಮೂರು ವರ್ಷಗಳ ಹಿಂದೆ ಗಡಿ ಭದ್ರತಾ ಪಡೆ(ಬಿಎಸ್‌ಎಫ್)ಗೆ ಸೇರಿದ್ದರು. ಜಮ್ಮುವಿನ ನವಗಾಂವ್ ವಲಯದ ಗಡಿ ನಿಯಂತ್ರಣ ರೇಖೆ ಬಳಿ ನೆಲದಡಿಯಲ್ಲಿ ಅಡಗಿಸಿಟ್ಟಿದ್ದ ಗ್ರೆನೇಡ್ ಸ್ಫೋಟದಿಂದಾಗಿ ಇಬ್ಬರು ಯೋಧರು ಮರಣವನ್ನಪ್ಪಿದ್ದರು.
ಜಿಲ್ಲಾ ಉಸ್ತವಾರಿ ಸಚಿವ ವಿನಯ್‌ಕುಲಕರ್ಣಿ ಹಾಗೂ ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಗ್ರಾಮದಲ್ಲಿ ಇದ್ದುಕೊಂಡು ಎಲ್ಲ ವ್ಯವಸ್ಥೆಗಳನ್ನು ನೋಡಿಕೊಂಡರು. ಜಿಲ್ಲಾಡಳಿತ ಹಾಗೂ ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಯೋಧನಿಗೆ ಗೌರವ ಸಲ್ಲಿಸಿದರು.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಖನಗಾಂವಿ ಬಳಿಯ ನಬಾಪುರ ಗ್ರಾಮದ ಯೋಧ ಸುಬೇದಾರ್ ಬಸವರಾಜ ಚನ್ನಪ್ಪ ಪಾಟೀಲ್ ಅವರ ಪಾರ್ಥಿವ ಶರೀರವನ್ನು ಖಾನಗಾಂವಿ ಗ್ರಾಮದಲ್ಲಿ ‘ವೀರ್ ಜವಾನ್ ಅಮರ್ ರಹೇ’ ಎಂಬ ಘೋಷಣೆಗಳ ನಡುವೆ ಮೆರವಣಿಗೆ ಮಾಡಲಾಯಿತು.
1990ರ ಆ.24ರಂದು ಮದರಾಸ್ ರೆಜಿಮೆಂಟ್‌ಗೆ ಸೇರಿದ್ದ ಬಸಪ್ಪ ಪಾಟೀಲ್, ಆನಂತರ ಜಮ್ಮು ಕಾಶ್ಮೀರದಲ್ಲಿ ಸೇವೆಗೆ ನಿಯೋಜಿತಗೊಂಡಿದ್ದರು. ಜು.29ರಂದು ಗಡಿ ನಿಯಂತ್ರಣ ರೇಖೆ ಬಳಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ನೆಲದಲ್ಲಿದ್ದ ಗ್ರೆನೇಡ್ ಸ್ಫೋಟಗೊಂಡಿತ್ತು. ದೇಶ ಸೇವೆ ಮಾಡುತ್ತಲೆ ತಮ್ಮ ಪ್ರಾಣತ್ಯಾಗ ಮಾಡಬೇಕು ಎಂಬ ಬಯಕೆಯನ್ನು ಹೊಂದಿದ್ದ ಬಸಪ್ಪ ಪಾಟೀಲ್, ಅದೇ ರೀತಿಯಲ್ಲಿ ವೀರಮರಣ ವನ್ನಪ್ಪಿದ್ದಾರೆ.
26 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿರುವ ಬಸವರಾಜ, ಮುಂಬರುವ ಎರಡು ವರ್ಷಗಳಲ್ಲಿ ನಿವೃತ್ತಿ ಪಡೆಯುವ ತವಕದಲ್ಲಿದ್ದರು. ಶೇಖವ್ವ ಎಂಬವರೊಂದಿಗೆ ವಿವಾಹವಾಗಿರುವ ಅವರಿಗೆ ಓರ್ವ ಪುತ್ರಿ ಹಾಗೂ ಪುತ್ರನಿದ್ದಾನೆ. ಇವರ ಮಗಳ ವಿವಾಹವಾಗಿದ್ದು, ಇವರ ಅಳಿಯನೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ತೆರೆದ ವಾಹನದಲ್ಲಿ ಗ್ರಾಮದಲ್ಲಿ ಪಾರ್ಥಿವ ಶರೀರವನ್ನು ಮೆರವಣಿಗೆ ಮಾಡಲಾಯಿತು. ಬಳಿಕ ಗ್ರಾಮದಲ್ಲಿ ಅವರ ಕುಟುಂಬದ ವಿಧಿ ವಿಧಾನಗಳೊಂದಿಗೆ ಹಾಗೂ ಸರಕಾರಿ ಗೌರವದೊಂದಿಗೆ ಅಂತ್ಯಕ್ರಿಯೆಯನ್ನು ನೆರವೇರಿಸಲಾುತು. ಹುತಾತ್ಮ ಯೋಧನಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರವಿಕಾಂತೇಗೌಡ, ಸೇನಾಧಿಕಾರಿಗಳು, ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದಭಜಂತ್ರಿ, ತಹಶೀಲ್ದಾರ್ ಎ.ಎಫ್.ಕಾರವಾರ ಮೃತ ಯೋಧನಿಗೆ ಅಂತಿಮ ಗೌರವ ಸಲ್ಲಿಸಿದರು.