ಇವರು ಅಂತಾರಾಷ್ಟ್ರೀಯ ಕಳ್ಳರು!

Update: 2016-08-03 03:48 GMT

ಚಂಡೀಗಢ, ಆ.3: ‘ಕೊಳ್ಳೆಹೊಡೆಯುವ ರಜೆ’ಯೊಂದಿಗೆ ಭಾರತಕ್ಕೆ ಲಗ್ಗೆ ಹಾಕಿದ್ದ ರೊಮಾನಿಯಾ ಮೂಲದ ಏಳು ಮಂದಿ ಇದೀಗ ಕಂಬಿ ಎಣಿಸುವಂತಾಗಿದೆ. ಜುಲೈ 12ರಂದು ಭಾರತಕ್ಕೆ ಆಗಮಿಸಿ, ದಿಲ್ಲಿ, ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ವಿವಿಧ ಜ್ಯುವೆಲ್ಲರಿ ಶಾಪ್ ಹಾಗೂ ವ್ಯಾಪಾರಿ ಮಳಿಗೆಗಳನ್ನು ದೋಚಿದ್ದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಜ್ರ, ಆಭರಣಗಳು ಹಾಗೂ ನಗದು ಸೇರಿದಂತೆ 12 ಲಕ್ಷ ರೂ. ವೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಗ್ಯಾಂಗ್‌ನಲ್ಲಿ ನಾಲ್ವರು ಮಹಿಳೆಯರೂ ಇದ್ದು, ಜುಲೈ 12ರಂದು ಪ್ರವಾಸಿ ವೀಸಾದಡಿ ಭಾರತಕ್ಕೆ ಆಗಮಿಸಿದ್ದಾರೆ. ಇದರ ವೀಸಾ ಅವಧಿ ಸೆಪ್ಟೆಂಬರ್ 2ರವರೆಗೆ ಇದೆ. ಈ ಜಾಲದಲ್ಲಿ ನಿಸ್ತರ್, ವೈಲುಕು ಜೆನಿಕಾ ನಿಕ್ಕು, ವೈದ್ವಾ ಅಲೆನ್, ಮೀರಾದಲ್ಲಾ ದುಮಿಜು, ಮರಿಗೆಲ್ ಲೊರೆನೊ, ಜೈತ್ರನ್ ಅಯಾನಾ ಹಾಗೂ ಮೂಕೆಲ್ ಶಕೀಲಿನಾ ಸೇರಿದ್ದಾರೆ.

ಎಲ್ಲ ಆರೋಪಿಗಳು ಇದೀಗ ಜೈಪುರ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಸ್ಥಳೀಯ ಆಭರಣ ಮಳಿಗೆಯ ಕಳ್ಳತನ ಪ್ರಕರಣದಲ್ಲಿ ಈ ಜಾಲವನ್ನು ಬಂಧಿಸಲಾಗಿದೆ. ಭಾರತಕ್ಕೆ ಬಂದ ತಕ್ಷಣ ಬಾಡಿಗೆ ಕಾರು ಪಡೆದುಕೊಂಡು ಜೈಪುರಕ್ಕೆ ಈ ತಂಡ ಆಗಮಿಸಿದೆ. ಅಲ್ಲಿ ಆಭರಣ ಅಂಗಡಿಯೊಂದರಿಂದ ವಜ್ರ ಹಾಗೂ ಚಿನ್ನಾಭರಣಗಳನ್ನು ದೋಚಿದೆ. ಬಳಿಕ ರೇವಾರಿಗೆ ಹೋಗಿ ಇನ್ನೊಂದು ಆಭರಣ ಅಂಗಡಿ ಮತ್ತು ನಿವಾಸವನ್ನು ಗುರಿ ಮಾಡಿದೆ.ಬಳಿಕ ಪಲ್ವಾಲ್, ಪರೀದಾಬಾದ್ ಹಾಗೂ ಜಜ್ಜಾರ್‌ನಲ್ಲಿ ಲೂಟಿ ಮಾಡಿದೆ. ಕೆಲ ಮಂದಿಯ ಸಂಶಯಾಸ್ಪದ ನಡವಳಿಕೆ ಬಗ್ಗೆ ದೊರಕಿದ ಖಚಿತ ಮಾಹಿತಿ ಆಧಾರದಲ್ಲಿ ಪೊಲೀಸರು ಇವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News