ಸಾಮಾಜಿಕ-ಶೈಕ್ಷಣಿಕ ವರದಿ ಆ.20ಕ್ಕೆ ಬಿಡುಗಡೆ: ಸಮಾಜ ಕಲ್ಯಾಣ ಸಚಿವ ಆಂಜನೇಯ
ಬೆಂಗಳೂರು, ಆ. 11: ರಾಜ್ಯ ಸರಕಾರ ನಡೆಸಿದ್ದ ಸಾಮಾಜಿಕ-ಶೈಕ್ಷಣಿಕ ಸಮೀಕ್ಷಾ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಆ.20ರಂದು ಮಾಜಿ ಸಿಎಂ ದೇವರಾಜ ಅರಸು ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ತನ್ನ ಕೊಠಡಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ವರದಿ ಬಿಡುಗಡೆಯ ಬಳಿಕ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂಗೀಕರಿಸಲಿದ್ದು, ಆ ಬಳಿಕ ರಾಜ್ಯದಲ್ಲಿನ ಎಲ್ಲ ವರ್ಗದ ಜನರ ಸಾಮಾಜಿಕ-ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು ಗೊತ್ತಾಗಲಿವೆ ಎಂದು ಪ್ರತಿಕ್ರಿಯೆ ನೀಡಿದರು.
ರಾಜ್ಯದಲ್ಲಿನ ಎಲ್ಲ ವರ್ಗದ ಜನರಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ದೃಷ್ಟಿಯಿಂದ ಸಮೀಕ್ಷೆ ನಡೆಸಿದ್ದು, ಅನಂತರ ರಾಜ್ಯದ ಎಲ್ಲ ವರ್ಗದ ಜನತೆಯ ನಿಖರ ಮಾಹಿತಿ ಲಭ್ಯವಾಗಲಿದೆ ಎಂದ ಅವರು, ಎಲ್ಲ ಜಾತಿಗಳಲ್ಲೂ ಬಡವರಿದ್ದು, ಜಾತಿ ಯಾವುದೇ ಇರಲಿ. ಆದರೆ, ಬಡವರಿಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಉದ್ದೇಶ ಎಂದು ಸ್ಪಷ್ಟಣೆ ನೀಡಿದರು.
ಜಾತಿಗಣತಿ ಅಲ್ಲ: ರಾಜ್ಯದಲ್ಲಿ ಪ್ರತ್ಯೇಕವಾಗಿ ಯಾವುದೇ ಜಾತಿ ಗಣತಿ ಮಾಡಿಲ್ಲ. ಬದಲಿಗೆ ರಾಜ್ಯದಲ್ಲಿನ ಜನತೆಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸಲಾಗಿದೆ ಎಂದು ಜಾತಿ ಗಣತಿಗೆ ಆಕ್ಷೇಪಿಸಿರುವ ನ್ಯಾಯಾಲಯದ ಆದೇಶಕ್ಕೆ ಆಂಜನೇಯ ಪ್ರತಿಕ್ರಿಯೆ ನೀಡಿದರು.
ಸುಪ್ರೀಂ ಕೋರ್ಟ್ ಪ್ರಕರಣವೊಂದರಲ್ಲಿ ನಿಮ್ಮ ಬಳಿ ಯಾವ ಶೈಕ್ಷಣಿಕ ಮಾಹಿತಿ ಇಲ್ಲ ಎಂದು ಪ್ರಶ್ನಿಸಿತ್ತು. ಆ ಹಿನ್ನೆಲೆಯಲ್ಲೆ ಜನ ಸಮುದಾಯಗಳ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗಳನ್ನು ತಿಳಿದುಕೊಳ್ಳಲು ಸಮೀಕ್ಷೆ ನಡೆಸಲಾಗಿತ್ತು ಎಂದು ಅವರು ತಿಳಿಸಿದರು.
ವಸತಿ ಶಾಲೆಗಳ ನಿರ್ಮಾಣ: ರಾಜ್ಯದಲ್ಲಿನ ಎಲ್ಲ ವರ್ಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ 2 ಸಾವಿರ ಕೋಟಿ ರೂ.ವೆಚ್ಚದಲ್ಲಿ 145 ವಸತಿ ಶಾಲೆಗಳನ್ನು ನಿರ್ಮಿಸಲು ಸರಕಾರ ನಿರ್ಧರಿಸಿದೆ ಎಂದು ಸಚಿವ ಆಂಜನೇಯ ಇಂದಿಲ್ಲಿ ಮಾಹಿತಿ ನೀಡಿದರು.
ಪ್ರತಿ ಹೋಬಳಿಗೊಂದು ವಸತಿ ಶಾಲೆ ಆರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಿದ್ದು, ಅದರಂತೆ ವಸತಿ ಶಾಲೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದ ಅವರು, ಈಗಾಗಲೇ ರಾಜ್ಯದಲ್ಲಿ 505 ವಸತಿ ಶಾಲೆಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ದೃಷ್ಟಿಯಿಂದ ಆರಂಭಿಸಿರುವ ಮೋರಾರ್ಜಿ ದೇಸಾಯಿ, ರಾಣಿ ಚೆನ್ನಮ್ಮ ವಸತಿ ಶಾಲೆಗಳು ಅತ್ಯಂತ ಯಶಸ್ವಿಯಾಗಿದ್ದು, ಅಲ್ಲಿನ ಮಕ್ಕಳು ಇಂದಿನ ಸ್ಪರ್ಧಾತ್ಮಕಯುಗಕ್ಕೆ ತಕ್ಕಂತೆ ಅಧ್ಯಯನ ಮಾಡುತ್ತಿದ್ದು, ಉತ್ತಮ ಫಲಿತಾಂಶ ಬರುತ್ತಿದೆ ಎಂದರು.
ಘೋಷಿತ 145 ವಸತಿ ಶಾಲೆಗಳ ನಿರ್ಮಾಣಕ್ಕೆ ಸ್ಥಳೀಯ ಶಾಸಕರೇ 10ರಿಂದ 12 ಎಕರೆ ಭೂಮಿಯನ್ನು ಗುರುತಿಸಿ ಒದಗಿಸಿಕೊಡಬೇಕು. ಆ ಬಳಿಕ ವಸತಿ ಶಾಲೆ ನಿರ್ಮಾಣಕ್ಕೆ ಪ್ರಕ್ರಿಯೆ ಆರಂಭಿಸಲಾಗುವುದು ಎಂದ ಅವರು, ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವಂತೆ ವಸತಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.