ಮಹಾದಾಯಿ ಹೋರಾಟಗಾರರಿಗೆ ಷರತ್ತುಬದ್ಧ ಜಾಮೀನು :187 ರೈತರ ಬಿಡುಗಡೆ
ಧಾರವಾಡ/ಬೆಂಗಳೂರು, ಆ.12: ಮಹಾದಾಯಿ ನೀರಿಗಾಗಿ ಪ್ರತಿಭಟನೆ ನಡೆಸಿ ಬಂಧಿತರಾಗಿದ್ದ ನವಲಗುಂದದ 187 ಮಂದಿ ರೈತ ಹೋರಾಟಗಾರರಿಗೆ ಧಾರವಾಡ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಶ್ರೀಶಾನಂದ ಷರತ್ತುಬದ್ಧ ಜಾಮೀನು ನೀಡಿದ್ದಾರೆ.
ಧಾರವಾಡದ ಹೈಕೋರ್ಟ್ ವಕೀಲರ ಸಂಘದಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು. ಸಂಘದ ಅಧ್ಯಕ್ಷ ವಿ.ಡಿ.ಕಾಮರಡ್ಡಿ, ಬಿ.ಡಿ.ಹಿರೇಮಠ, ಎ.ಎಸ್.ಶಿಂಧೆ, ಎ.ಎಸ್.ಹೊಳೆಯಣ್ಣವರ, ಕೆ.ಎಚ್.ಪಾಟೀಲ್ ಮತ್ತು ಇತರ ವಕೀಲರು ಕೋರಿ ಅರ್ಜಿ ಸಲ್ಲಿಸಿದ್ದರು.
ಪ್ರತಿಭಟನಾ ನಿರತ ರೈತರ ಮೇಲೆ ಹಲ್ಲೆ ಮತ್ತು ಬಂಧನ ಖಂಡಿಸಿ ಪ್ರತಿಪಕ್ಷಗಳು ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಂಧಿತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿದ್ದವು.
ಸಂತಸವಾಗಿದೆ : ಮಹಾದಾಯಿ ನದಿ ನೀರು ಹಂಚಿಕೆ ಕುರಿತು ಇತ್ತೀಚೆಗೆ ನಡೆದ ಹೋರಾಟದ ಸಂದರ್ಭದಲ್ಲಿ ಬಂಧಿತರಾಗಿದ್ದ ರೈತರಿಗೆ ಜಾಮೀನು ಸಿಕ್ಕಿರುವುದು ಸಂತಸವಾಗಿದೆ ಎಂದು ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ತಿಳಿಸಿದ್ದಾರೆ. ಯಮನೂರಿಗೆ ಭೇಟಿ ನೀಡಿದ ಸಚಿವರು, ಬಂಧಿತರಾಗಿರುವ ರೈತರ ವಿರುದ್ಧ ಆಕ್ಷೇಪಣೆ ಸಲ್ಲಿಸದಿರಲು ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರ ತೀರ್ಮಾನ ಕೈಗೊಂಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ರೈತಪರ ನಿಲುವು ಹೊಂದಿರುವುದರಿಂದ ಇದು ಸಾಧ್ಯವಾಗಿದೆ ಎಂದು ತಿಳಿಸಿದರು.
ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ರೈತರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಲಾಗುವುದು. ಘಟನೆಯಲ್ಲಿ ಆಸ್ತಿ ಪಾಸ್ತಿ ಹಾನಿಯಾಗಿರುವ ಬಗ್ಗೆ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದು. ಪರಿಹಾರ ಒದಗಿಸಲಾಗುವುದು. ರೈತರನ್ನು ಕರೆತರಲು ಬಳ್ಳಾರಿಯಿಂದ ಎರಡು ಹಾಗೂ ಚಿತ್ರದುರ್ಗದಿಂದ ಒಂದು ಸಾರಿಗೆ ಬಸ್ ನೀಡಲಾಗುವುದು ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು.