×
Ad

ಬೆಂಗಳೂರಿಗೆ ಬರಲಿದೆ ಅಮೆರಿಕ ಕಾನ್ಸುಲೇಟ್!

Update: 2016-08-13 08:24 IST

ಬೆಂಗಳೂರು, ಆ.13: ಶೀಘ್ರವೇ ಬೆಂಗಳೂರಿನಲ್ಲಿ ಅಮೆರಿಕ ಕಾನ್ಸುಲೇಟ್ ಸ್ಥಾಪನೆಯಾಗುವ ನಿರೀಕ್ಷೆ ಇದೆ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಪ್ರಕಟಿಸಿದ್ದಾರೆ.

ದೇಶದ ಐಟಿ ರಾಜಧಾನಿ ಎನಿಸಿದ ಬೆಂಗಳೂರಿನಲ್ಲಿ ಅಮೆರಿಕನ್ ಕಾನ್ಸುಲೇಟ್ ಕಚೇರಿ ಆರಂಭಿಸಲು ಒತ್ತಡ ತರಬೇಕು ಎಂಬ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿದ ಸುಷ್ಮಾ, "ಅಮೆರಿಕ ಜತೆ ನಿಕಟವಾದ ಆರ್ಥಿಕ ಹಾಗೂ ಸಾಮಾಜಿಕ ಸಂಪರ್ಕವನ್ನು ಹೊಂದಿರುವ ಹಿನ್ನೆಲೆಯಲ್ಲಿ, ಅಮೆರಿಕದ ಹೊಸ ಕಾನ್ಸುಲೇಟ್ ಕಚೇರಿಗೆ ಬೆಂಗಳೂರನ್ನು ಸಂಭಾವ್ಯ ಸ್ಥಳವಾಗಿ ಪರಿಗಣಿಸಲಾಗುವುದು" ಎಂದು ಸ್ಪಷ್ಟಪಡಿಸಿದರು.

ಮೋದಿಯವರ ಇತ್ತೀಚಿನ ಅಮೆರಿಕ ಭೇಟಿಯ ವೇಳೆ, ಉಭಯ ದೇಶಗಳು ಪರಸ್ಪರ ದೇಶಗಳಲ್ಲಿ ಹೆಚ್ಚುವರಿ ಕಾನ್ಸುಲೇಟ್‌ಗಳನ್ನು ಆರಂಭಿಸಲು ಒಪ್ಪಿಕೊಂಡಿವೆ ಎಂದು ಯಡಿಯೂರಪ್ಪ ಅವರಿಗೆ ಬರೆದ ಪತ್ರದಲ್ಲಿ ಸುಷ್ಮಾ ಹೇಳಿದ್ದಾರೆ. 2008ರಲ್ಲಿ ಹೈದರಾಬಾದ್‌ನಲ್ಲಿ ಅಮೆರಿಕನ್ ಕಾನ್ಸುಲೇಟ್ ಸ್ಥಾಪನೆ ಬಳಿಕ ಅಮೆರಿಕದ ಕಾನ್ಸುಲೇಟ್ ಜನರಲ್ ಆಂಡ್ರೂ ಟಿ.ಸಿಮ್ಕಿನ್ ಅವರು ಭಾರತದಲ್ಲಿ ಹೆಚ್ಚುವರಿ ಕಾನ್ಸುಲೇಟ್ ಸ್ಥಾಪನೆ ಸಾಧ್ಯತೆಯನ್ನು ತಳ್ಳಿಹಾಕಿದ್ದರು.

ಆದರೆ ದೊಡ್ಡಸಂಖ್ಯೆಯ ಐಟಿ ಕಂಪನಿಗಳು ಬೆಂಗಳೂರಿನಲ್ಲಿದ್ದು, ಇಲ್ಲಿನ ಉದ್ಯೋಗಿಗಳು ಅಮೆರಿಕಕ್ಕೆ ನಿಯತವಾಗಿ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಕಳೆದ ಕೆಲ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಅಮೆರಿಕನ್ ಕಾನ್ಸುಲೇಟ್ ಆರಂಭಿಸಬೇಕು ಎಂಬ ಬೇಡಿಕೆ ಹೆಚ್ಚುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ, ಅಮೆರಿಕ ನಿಯೋಗದ ಜತೆಗಿನ ಮಾತುಕತೆಯಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವಂತೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News