×
Ad

ವೈಯಕ್ತಿಕ ಸಭೆ-ಸಮಾರಂಭಗಳಿಗೆ ಅವಕಾಶವಿಲ್ಲ: ಈಶ್ವರಪ್ಪಗೆ ಬಿಎಸ್‌ವೈ ಖಡಕ್ ಎಚ್ಚರಿಕೆ

Update: 2016-08-16 19:44 IST

ಬೆಂಗಳೂರು, ಆ. 16: ಯಾವುದೇ ಮುಖಂಡರೆ ಇರಲಿ ಪಕ್ಷದ ಬ್ಯಾನರ್‌ನಡಿ ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ವೈಯಕ್ತಿಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಇಲ್ಲಿನ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಏರ್ಪಡಿಸಿದ್ದ ಕೋರ್ ಕಮಿಟಿ ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿ ಎಸ್ಸಿ-ಎಸ್ಟಿ, ರೈತ, ಯುವ, ಹಿಂ.ವರ್ಗ ಸೇರಿ ವಿವಿಧ ಮೋರ್ಚಾಗಳಿವೆ. ಯಾರೊಬ್ಬರೂ ವೈಯಕ್ತಿಕ ಅಥವಾ ಪ್ರತ್ಯೇಕವಾಗಿ ಸಭೆ-ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ‘ಹಿಂದುಳಿದ ಮತ್ತು ದಲಿತ’ ಸಮಾವೇಶ ನಡೆಸಲು ಮುಂದಾಗಿದ್ದ ಈಶ್ವರಪ್ಪಗೆ ತಿರುಗೇಟು ನೀಡಿದರು. ಆ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗ ಆಗಿದೆ.

ಪಕ್ಷ ಸಂಘಟನೆ ದೃಷ್ಟಿಯಿಂದ ಹಮ್ಮಿಕೊಂಡಿರುವ ತಿರಂಗ ಯಾತ್ರೆ ಹಿನ್ನೆಲೆಯಲ್ಲಿ ಆ.21ರಂದು ಮಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ ಎಂದು ಬಿಎಸ್‌ವೈ ತಿಳಿಸಿದರು.

ಆ.31ರಂದು ಹೊಸದಿಲ್ಲಿಯಲ್ಲಿ ರಾಜ್ಯಸಭೆ ಸದಸ್ಯರ ಸಭೆ ಕರೆಯಲಾಗಿದ್ದು, ಆ ಸಭೆಗೆ ರಾಜ್ಯದಿಂದ ಯಾರನ್ನು ಕಳುಸಬೇಕೆಂಬ ಬಗ್ಗೆ ಚರ್ಚಿಸಿದ್ದೇವೆ. ಸೆ.24, 25ರಂದು ಕಲ್ಲಿಕೋಟೆಯಲ್ಲಿ ಪಕ್ಷದ ಸಮಾವೇಶ ನಡೆಯಲಿದೆ ಎಂದು ಯಡಿಯೂರಪ್ಪ ಇದೇ ವೇಳೆ ಮಾಹಿತಿ ನೀಡಿದರು.

ಪಕ್ಷದ ಸಂಘಟನೆ ಮತ್ತು ಸದಸ್ಯರ ನೋಂದಣಿ ಸಂಬಂಧ ಪದಾಧಿಕಾರಿಗಳಿಗೆ ಮಾರ್ಗದರ್ಶನ ನೀಡಲು ಉದ್ದೇಶಿಸಲಾಗಿದೆ ಎಂದ ಅವರು, ಅಕ್ಟೋಬರ್ 3 ಮತ್ತು 4ರಂದು ಬೆಳಗಾವಿಯಲ್ಲಿ ರಾಜ್ಯಕಾರ್ಯಕಾರಣಿ ಸಭೆ ನಡೆಯಲಿದೆ ಎಂದು ವಿವರ ನೀಡಿದರು.

ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್‌ಲಾಲ್ ಪಕ್ಷದ ಸಂಘಟನೆ ಕುರಿತಂತೆ ಮಾರ್ಗದರ್ಶನ ನೀಡಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ. ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ದಿನಾಂಕವನ್ನು ನಿಗದಿ ಪಡಿಸಲಾಗುವುದು ಎಂದು ಬಿಎಸ್‌ವೈ ತಿಳಿಸಿದರು.

 ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ‘ತಿರಂಗ ಯಾತ್ರೆ’ಗೆ ರಾಜ್ಯ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಈಗಾಗಲೇ 206 ಕಡೆ ಯಾತ್ರೆ ನಡೆದಿದೆ. ಆ.23ರ ವರೆಗೆ ಯಾತ್ರೆ ನಡೆಯಲಿದ್ದು, ಸುಮಾರು ಒಂದು ಸಾವಿರ ಸ್ಥಳಗಳಲ್ಲಿ ನಡೆಸಲು ಪಕ್ಷ ಉದ್ದೇಶಿಸಿದೆ ಎಂದರು.

ಕಾರ್ಯಕಾರಿಣಿಯಲ್ಲಿ ಕೇಂದ್ರ ಸಚಿವ ಅನಂತ ಕುಮಾರ್, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಮೇಲ್ಮನೆ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ, ಸಂಸದರಾದ ಪ್ರಹ್ಲಾದ್‌ಜೋಷಿ, ನಳೀನ್‌ಕುಮಾರ್ ಕಟೀಲ್, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಸಿ.ಟಿ.ರವಿ, ಸಿ.ಎಂ.ಉದಾಸಿ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಪಕ್ಷದ ಪದಾಧಿಕಾರಿಗಳ ನೇಮಕ ಹಾಗೂ ಹಿಂ.ವರ್ಗಗಳ ಸಮಾವೇಶಕ್ಕೆ ಸಿದ್ಧತೆ ಹಿನ್ನೆಲೆಯಲ್ಲಿ ಹಾವು-ಮುಂಗಸಿಯಂತಿದ್ದ ಯಡಿಯೂರಪ್ಪ ಹಾಗೂ ಈಶ್ವರಪ್ಪ ಕೋರ್ ಕಮಿಟಿ ಸಭೆಗೆ ಪಕ್ಷದ ಕಚೇರಿಯ ಒಂದೇ ಲಿಫ್ಟ್‌ನಲ್ಲಿ ಜೊತೆ-ಜೊತೆಯಾಗಿ ಆಗಮಿಸಿ ಅಚ್ಚರಿ ಮೂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News