ಹರ್ಯಾಣ ಅಸೆಂಬ್ಲಿಯಲ್ಲಿ ಜೈನ ಸ್ವಾಮೀಜಿಯಿಂದ ಶಾಸಕರಿಗೆ ಪಾಠ

Update: 2016-08-27 06:36 GMT

ಚಂಡೀಗಢ, ಆ.27: ಹರ್ಯಾಣ ಅಸೆಂಬ್ಲಿಯ ಮಳೆಗಾಲದ ಅಧಿವೇಶನ ಶುಕ್ರವಾರ ವಿಶೇಷ ರೀತಿಯಲ್ಲಿ ಆರಂಭವಾಯಿತು. ದಿಗಂಬರ ಜೈನ ಮುನಿ ತರುಣ ಸಾಗರ ಅವರು ಈ ಅಧಿವೇಶನದಲ್ಲಿ ಮುಖ್ಯ ಭಾಷಣಕಾರರಾಗಿ ಗವರ್ನರ್, ಸಿಎಂ ಹಾಗೂ ಶಾಸಕರ ಆಸೀನಗಳಿಗಿಂತ ಮೇಲಿದ್ದ ಆಸೀನದಲ್ಲಿ ಕುಳಿತಿದ್ದರಲ್ಲದೆ ಸುಮಾರು 40 ನಿಮಿಷಗಳ ಕಾಲ ಅವರು ನೀಡಿದ ಭಾಷಣವನ್ನು ತದೇಕಚಿತ್ತರಾಗಿ ಎಲ್ಲರೂ ಆಲಿಸಿದರು.

ರಾಜ್ಯದ ಶಿಕ್ಷಣ ಸಚಿವ ರಾಮ ಬಿಲಾಸ್ ಶರ್ಮ ಅವರಿಂದ ಆಹ್ವಾನಿತರಾಗಿ ಈ ಮಳೆಗಾಲದ ಅಧಿವೇಶನದ ಆರಂಭಕ್ಕೆ ಬಂದಿದ್ದ ತರುಣ ಸಾಗರ ಮುನಿ ತಮ್ಮ ‘ಕಡ್ವೆ ವಚನ್’ನಲ್ಲಿ ಹಲವು ಪ್ರಮುಖ ವಿಚಾರಗಳನ್ನೆತ್ತಿದರು. ಗಂಡನನ್ನು ಧರ್ಮಕ್ಕೆ ಹಾಗೂ ರಾಜಕೀಯವನ್ನು ಹೆಂಡತಿಗೆ ಹೋಲಿಸಿದ ಅವರು, ಪ್ರತಿಯೊಬ್ಬ ಪತ್ನಿ ತನ್ನ ಪತಿಯ ಮಾತನ್ನು ಕೇಳಬೇಕೆಂದು ಹೇಳಿದರಲ್ಲದೆ, ಧರ್ಮ ವಿಧಿಸಿದ ಶಿಸ್ತನ್ನು ರಾಜಕೀಯ ಒಪ್ಪಬೇಕೆಂದರು. ‘‘ಧರ್ಮಕ್ಕೆ ರಾಜಕೀಯದ ಮೇಲೆ ಹಿಡಿತವಿಲ್ಲದೇ ಹೋದಲ್ಲಿ ಅದು ನಿಯಂತ್ರಣ ತಪ್ಪಿದ ಆನೆಯಂತಾಗುತ್ತದೆ’’ ಎಂದವರು ಹೇಳಿದರು.

ಹೆಣ್ಣು ಭ್ರೂಣ ಹತ್ಯೆ ವಿಚಾರವನ್ನು ಪ್ರಸ್ತಾಪಿಸಿದ ಅವರು ಇದೊಂದು ದೊಡ್ಡ ಸಮಸ್ಯೆಯಾಗಿದೆ ಎಂದರಲ್ಲದೆ, ಇದರಿಂದಾಗಿ ಸಮಾಜದಲ್ಲಿ ಅಪರಾಧ ಹಾಗೂ ಅತ್ಯಾಚಾರಗಳಿಗೆ ಆಸ್ಪದ ನೀಡಿದಂತಾಗುವುದು. ತಾನು ಈ ಸಮಸ್ಯೆಯನ್ನು ರಾಜಕೀಯವಾಗಿ, ಸಾಮಾಜಿಕವಾಗಿ ಹಾಗೂ ಧಾರ್ಮಿಕವಾಗಿ ಪರಿಹರಿಸಲು ಒಂದು ಸೂತ್ರ ಕಂಡು ಹಿಡಿದಿರುವುದಾಗಿಯೂ ಅವರು ಹೇಳಿದರು.

‘‘ರಾಜಕೀಯವಾಗಿ ಯಾರಿಗೆ ಹೆಣ್ಣು ಮಕ್ಕಳು ಇಲ್ಲವೋ ಅವರಿಗೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಸ್ಪರ್ಧಿಸುವ ಅವಕಾಶ ನೀಡಬಾರದು. ಸಾಮಾಜಿಕವಾಗಿ, ಹೆಣ್ಣು ಮಕ್ಕಳಿಲ್ಲದ ಕುಟುಂಬಗಳಿಗೆ ಜನರು ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕೊಡಬಾರದು. ಧಾರ್ಮಿಕವಾಗಿ, ಸಂತರು ಹೆಣ್ಣು ಮಕ್ಕಳಿಲ್ಲದ ಮನೆಗಳಿಂದ ಭಿಕ್ಷೆಯನ್ನು ಸ್ವೀಕರಿಸಬಾರದು’’ ಎಂದು ತರುಣಸಾಗರ ಮುನಿ ಹೇಳಿದರು. ‘‘ಇಂದು ಕೂಡ ಹೆಣ್ಣು ಹಾಗೂ ಗಂಡು ಮಕ್ಕಳ ನಡುವೆ ಭೇದಭಾವ ಮಾಡುವುದನ್ನು ನೋಡಿದಾಗ ನಾವು 14ನೆ ಶತಮಾನದಲ್ಲಿದ್ದೇವೆಯೇ ಎಂದು ನನಗನಿಸುತ್ತದೆ’’ಎಂದು ಅವರು ತಿಳಿಸಿದರು.

ಸಂಸತ್ತಿನ ಬಗ್ಗೆ ಮಾತನಾಡಿದ ಅವರು, ದೇಶದ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶ ಹೊಂದಿರುವ ಸಂಸತ್ತೇ ದೊಡ್ಡ ಸಮಸ್ಯೆಯಾಗಿದೆ. ಸಮೀಕ್ಷೆಯೊಂದರ ಪ್ರಕಾರ 160 ಸಂಸದರ ಮೇಲೆ ಕ್ರಿಮಿನಲ್ ಪ್ರಕರಣಗಳಿವೆ. ಕ್ರಿಮಿನಲ್ ಶಕ್ತಿಗಳು ಲೋಕಸಭಾ ಹಾಗೂ ವಿಧಾನಸಭಾ ಮೆಟ್ಟಲುಗಳನ್ನು ಹತ್ತದಂತೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಉಗ್ರವಾದದ ಬಗ್ಗೆ ಪ್ರಸ್ತಾಪಿಸಿದ ತರುಣಸಾಗರ, ಯಾವುದೇ ಧರ್ಮ ಉಗ್ರವಾದವನ್ನು ಉತ್ತೇಜಿಸುವುದಿಲ್ಲವೆಂದರು. ಶಸ್ತ್ರಾಸ್ತ್ರಗಳಿಗೆ ಉಪಯೋಗಿಸಲಾಗುವ ಹಣವನ್ನು ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಉಪಯೋಗಿಸಿದಾಗ ಬದಲಾವಣೆಯನ್ನು ನಿರೀಕ್ಷಿಸಬಹುದು, ಎಂದು ಅವರು ಹೇಳಿದರು.

ನೆರೆಯ ಪಾಕಿಸ್ತಾನವನ್ನೂ ಟೀಕಿಸಿದ ಅವರು ‘‘ಪಾಕಿಸ್ತಾನ ಉಗ್ರವಾದವನ್ನು ಉತ್ತೇಜಿಸುತ್ತಿದೆಯೆಂದು ಎಲ್ಲರಿಗೂ ಗೊತ್ತು, ಅದು ಭಸ್ಮಾಸುರರನ್ನು ಸೃಷ್ಟಿಸಿ ಭಾರತಕ್ಕೆ ತೊಂದರೆಯುಂಟು ಮಾಡುತ್ತಿದೆ’’ ಎಂದು ದೂರಿದರು.

ಸಕ್ರಿಯ ರಾಜಕಾರಣಿಗಳಿಗೆ ನಿವೃತ್ತಿ ವಯಸ್ಸನ್ನು ನಿಗದಿ ಪಡಿಸಿರುವ ನರೇಂದ್ರ ಮೋದಿ ಸರಕಾರವನ್ನು ಹೊಗಳಿದ ಅವರು, ಖಟ್ಟರ್ ಸರಕಾರಕ್ಕೆ ಸಲಹೆಯೊಂದನ್ನೂ ನೀಡಿದರು. ‘‘ನೀವು ಹೃಷಿಕೇಶದಲ್ಲಿ ಗಂಗೆಯನ್ನು ಶುದ್ಧೀಕರಿಸಲು ಯಶಸ್ವಿಯಾದರೆ, ಹರಿದ್ವಾರ ಮತ್ತು ಎಲ್ಲಾ ಘಾಟ್‌ಗಳು ತನ್ನಿಂತಾನಾಗಿಯೇ ಸ್ವಚ್ಛವಾಗುವವು. ಈ ಅಧಿವೇಶನದ ಪ್ರಥಮ ದಿನದಂದು ನೀವು ವಿಧಾನಸಭೆಯಲ್ಲಿ ಧರ್ಮವನ್ನಿಟ್ಟರೆ ರಾಜಕೀಯದ ಎಲ್ಲಾ ಘಾಟ್‌ಗಳು ತನ್ನಿಂತಾನಾಗಿಯೇ ಶುದ್ಧವಾಗುವುದು. ಖಟ್ಟರ್ ಸರಕಾರ ರಾಜಕೀಯವನ್ನು ಕೇಸರೀಕರಣಗೊಳಿಸಿದೆಯೆಂಬ ಆಪಾದನೆ ಎದುರಿಸಬೇಕಾಗಬಹುದು. ಆದರೆ ಇದು ಕೇಸರೀಕರಣವಲ್ಲ, ಬದಲಾಗಿ ರಾಜಕೀಯದ ಶುದ್ಧೀಕರಣ’’ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News