ಪೂಂಛ್ ದಾಳಿ ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್: ಕಾಂಗ್ರೆಸ್ ನಾಯಕ ಚರಣ್ ಜಿತ್ ಚನ್ನಿ ಅವರಿಂದ ಸ್ಫೋಟಕ ಹೇಳಿಕೆ

Update: 2024-05-05 14:08 GMT

Photo : indiatoday

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ನಡೆದ ಉಗ್ರರ ದಾಳಿಯು ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್‌ ಎಂದು ರವಿವಾರ ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಚರಣ್ ಜಿತ್ ಸಿಂಗ್ ಚನ್ನಿ, “ಇವೆಲ್ಲ ಗಿಮಿಕ್‌ ಆಗಿದ್ದು, ಭಯೋತ್ಪಾದಕ ದಾಳಿಯಲ್ಲ. ಇವು ಬಿಜೆಪಿಯ ಚುನಾವಣಾ ಪೂರ್ವ ಗಿಮಿಕ್‌ ಅಲ್ಲದೆ ಮತ್ತೇನಲ್ಲ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿಯು ಜನರ ಜೀವ ಮತ್ತು ದೇಹಗಳೊಂದಿಗೆ ಆಟವಾಡುತ್ತಿದೆ” ಎಂದು ಆರೋಪಿಸಿದ್ದಾರೆ.

ಚುನಾವಣೆಯಲ್ಲಿ ಮೇಲುಗೈ ಸಾಧಿಸಲು ಬಿಜೆಪಿಯು ಇಂತಹ ಘಟನೆಗಳನ್ನು ರೂಪಿಸುತ್ತಿದ್ದು, ಈ ದಾಳಿಗಳು ಪೂರ್ವನಿರ್ಧಾರಿತವಾಗಿವೆ ಹಾಗೂ ಬಿಜೆಪಿಯ ಚುನಾವಣಾ ಭವಿಷ್ಯವನ್ನು ಉತ್ತೇಜಿಸಲು ನಡೆಸಲಾಗಿದೆ ಎಂದು ಚನ್ನಿ ಆರೋಪಿಸಿದ್ದಾರೆ. “ಚುನಾವಣೆಗಳು ಬಂದಾಗಲೆಲ್ಲ ಇಂತಹ ಗಿಮಿಕ್‌ ಗಳನ್ನು ಮಾಡಲಾಗುತ್ತದೆ ಹಾಗೂ ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲೂ ಇಂತಹುದೇ ದಾಳಿ ನಡೆದಿತ್ತು” ಎಂದು ಅವರು ದೂರಿದ್ದಾರೆ.

ಶನಿವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಉಗ್ರರು ಭಾರತೀಯ ವಾಯು ಪಡೆಯ ಬೆಂಗಾವಲು ವಾಹನದ ಮೇಲೆ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ವಾಯು ಪಡೆಯ ಸಿಬ್ಬಂದಿ ಮೃತಪಟ್ಟು, ನಾಲ್ಕು ಮಂದಿ ಗಾಯಗೊಂಡಿದ್ದಾರೆ. ಸುರಾನ್ ಕೋಟೆಯ ಸನೈ ಗ್ರಾಮದಲ್ಲಿ ಈ ದಾಳಿ ನಡೆದಿದೆ.

ಗಾಯಗೊಂಡಿರುವ ನಾಲ್ವರು ಸಿಬ್ಬಂದಿಗಳ ಪೈಕಿ ಓರ್ವ ಸಿಬ್ಬಂದಿಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದ್ದು, ಉಳಿದ ಮೂವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಸೇನಾ ಸಿಬ್ಬಂದಿಯ ಮೇಲೆ ನಡೆದಿರುವ ಭಯೋತ್ಪಾದಕ ದಾಳಿಯನ್ನು ಹೇಡಿತನದ ಕೃತ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಖಂಡಿಸಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ಪೂಂಛ್ ನಲ್ಲಿ ನಮ್ಮ ಸೇನಾ ಬೆಂಗಾವಲು ವಾಹನದ ಮೇಲೆ ನಡೆದಿರುವ ಹೇಡಿತನ ಮತ್ತು ಹಿಂಜರಿಕೆಯಿಲ್ಲದ ಭಯೋತ್ಪಾದಕ ದಾಳಿಯು ಅಪಮಾನಕರ ಮತ್ತು ಖೇದಕರವಾಗಿದೆ. ಹುತಾತ್ಮ ಯೋಧರಿಗೆ ನನ್ನ ಹೃದಯಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಹಾಗೂ ಮೃತರ ಕುಟುಂಬದ ಸದಸ್ಯರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ದಾಳಿಯಲ್ಲಿ ಗಾಯಗೊಂಡಿರುವ ಯೋಧರು ಆದಷ್ಟೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News