‘ಸ್ವಸ್ಥ ಭಾರತ’ ಇಂದಿನ ಅಗತ್ಯ: ಸಚಿನ್ ತೆಂಡೂಲ್ಕರ್
ಬೆಂಗಳೂರು, ಆ.27 ದೇಶಕ್ಕೆ ‘ಸ್ವಚ್ಛ ಭಾರತ’ದ ಜೊತೆಗೆ ಸ್ವಸ್ಥಭಾರತದ ಅಗತ್ಯವೂ ಇದೆ ಎಂದು ಭಾರತರತ್ನ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇಂದಿಲ್ಲಿ ಅಭಿಪ್ರಾಯಪಟ್ಟರು.
ಶನಿವಾರ ನಗರದ ಹೆಬ್ಬಾಳದಲ್ಲಿ ನೂತನವಾಗಿ ನಿರ್ಮಿಸಿರುವ 500ಕ್ಕೂ ಹೆಚ್ಚು ಹಾಸಿಗೆಗಳ ಆಸ್ಟರ್ ಸಿ.ಎಂ.ಐ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ದೈಹಿಕವಾಗಿ ಸದೃಢವಾಗಿದ್ದರೆ ಮಾನಸಿಕವಾಗಿಯೂ ದೃಢತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದ ಅವರು, ನಮ್ಮ ದೇಶಕ್ಕೆ ಸ್ವಚ್ಛ ಭಾರತದ ಜೊತೆಗೆ ಆರೋಗ್ಯಕರ ಸ್ವಸ್ಥ ಭಾರತವು ಮುಖ್ಯವಾಗಿದೆ. ಅಲ್ಲದೆ, ಎಲ್ಲ ಕಾಯಿಲೆಗಳಿಗೂ ಪರಿಹಾರವಿದೆ. ಈ ನಿಟ್ಟಿನಲ್ಲಿ ವೈದ್ಯರ ಸಲಹೆ ಮೂಲಕ ಎಲ್ಲವನ್ನೂ ಸರಿಪಡಿಸಬಹುದಾಗಿದೆ ಎಂದು ನುಡಿದರು.
ತಾನೂ ಸಹ ಎಲ್ಲರಂತೆ ಟೆನಿಸ್ ಬಾಲ್‌ನಲ್ಲಿ ಕ್ರಿಕೆಟ್ ಆಟ ಆರಂಭಿಸಿದೆ. ಅಲ್ಲದೆ, ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಡೆ ಹೆಚ್ಚು ಗಮನ ನೀಡಿದರೆ ಮಾತ್ರ ನಾವು ಎಲ್ಲವನ್ನು ಸಾಧನೆ ಮಾಡಬಹುದಾಗಿದೆ. ನಮ್ಮ ದೇಶದ ಯುವ ಶಕ್ತಿ ಸದೃಢತೆ ಕಡೆ ಗಮನ ನೀಡಬೇಕೆಂದು ಸಚಿನ್ ಕರೆ ನೀಡಿದರು. ವೈದ್ಯರಿಗೆ ಋಣಿ: ತಾವು ಕ್ರಿಕೆಟ್ ಆಡುವಾಗ ಹಲವು ಬಾರಿ ಗಾಯಗಳಾಗಿದ್ದು, ಆಗ ನಮ್ಮ ಕುಟಂಬಸ್ಥರು ಪ್ರಾಥಮಿಕ ಚಿಕಿತ್ಸೆ ಮಾಡುತ್ತಿದ್ದರು. ಅಲ್ಲದೆ, ತಜ್ಞ ವೈದ್ಯರ ಸಕಾಲಿಕ ಚಿಕಿತ್ಸೆಯಿಂದಾಗಿ ಈ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಲು ಸಾಧ್ಯವಾಯಿತು. ತಮ್ಮ ಆರೋಗ್ಯ ಕಾಪಾಡಲು ಶ್ರಮಿಸಿದ ವೈದ್ಯರಿಗೆ ಋಣಿಯಾಗಿದ್ದೇನೆ ಎಂದು ಸಚಿನ್ ಹೇಳಿದರು.
2 ಕೋಟಿ ರೂ.: ಕ್ಯಾನ್ಸರ್ ಮತ್ತು ಬಡ ರೋಗಿಗಳಿಗೆ ಅಗ್ಗದ ದರದಲ್ಲಿ ಚಿಕಿತ್ಸೆ ನೀಡುವ ಸಲುವಾಗಿ ತಾವು 2 ಕೋಟಿ ರೂ. ಆರೋಗ್ಯದ ಕಾರ್ಯಕ್ರಮಗಳಿಗೆ ದೇಣಿಗೆ ನೀಡಿದ್ದು, ಆರೋಗ್ಯದ ಕ್ಷೇತ್ರಕ್ಕೆ ಎಲ್ಲರೂ ಸಹಾಯ ಮಾಡಬೇಕೆಂದು ಅವರು ಕರೆ ನೀಡಿದರು.
ಹೃದ್ರೋಗ ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೂ ಅಗ್ಗದ ದರದಲ್ಲಿ ಚಿಕಿತ್ಸೆ ದೊರೆಯುವಂತಾಗಬೇಕು. ಈ ನಿಟ್ಟಿನಲ್ಲಿ ಸರಕಾರವು ಸಹಾಯಕ್ಕೆ ಮುಂದಾಗಲಿದ್ದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿರುವಂತೆ ಸರಕಾರಿ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಸರಕಾರ ಮುಂದಾಗಿದೆ ಎಂದು ಹೇಳಿದರು.
ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಮಹಾನ್ ಸಾಧನೆ ಮಾಡಿದ್ದಾರೆ. ಆದರೆ, ಅವರು ಇಂದಿಗೂ ಸರಳತೆಯಿಂದ ನಡೆದುಕೊಳ್ಳುತ್ತಾರೆ. ಸಚಿನ್‌ಗೆ ದೇವರು ಮತ್ತಷ್ಟು ಯಶಸ್ಸು ನೀಡಲಿ. ಅಲ್ಲದೆ, ಒಂದು ಕಾಲದಲ್ಲಿ ವಿದೇಶಗಳಿಗೆ ಚಿಕಿತ್ಸೆಗಾಗಿ ಹೋಗುತ್ತಿದ್ದರು. ಆದರೆ, ಇದೀಗ ಬೆಂಗಳೂರಿಗೆ ವಿದೇಶಿಯರು ಚಿಕಿತ್ಸೆಗಾಗಿ ಬರುತ್ತಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ರಾಜ್ಯದ ಸಚಿವರಾದ ಕೃಷ್ಣ ಬೈರೇಗೌಡ, ಯು.ಟಿ.ಖಾದರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಶಾಸಕ ಎನ್.ಎ.ಹಾರೀಸ್, ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಆಝಾದ್ ಮೂಪೆನ್ ಹಾಗೂ ತಜ್ಞ ವೈದ್ಯರುಗಳು ಸೇರಿ ಪ್ರಮುಖರು ಉಪಸ್ಥಿತರಿದ್ದರು.