ಸಂವಿಧಾನ ಸದೃಢಗೊಳಿಸುವುದು ಯುವ ಸಮುದಾಯದ ಜವಾಬ್ದಾರಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ
ಬೆಂಗಳೂರು, ಆ. 28: ಮುಂಬರುವ ದಿನಗಳಲ್ಲಿ ದೇಶವನ್ನು ಮಹತ್ವದ ಗುರಿಯೆಡೆಗೆ ಮುನ್ನಡೆಸುವ ನಿಟ್ಟಿನಲ್ಲಿ ಸಮಾನತೆ, ಸ್ವಾತಂತ್ರ್ಯ ಮತ್ತು ಕಾನೂನು ವ್ಯಾಪ್ತಿಯ ಮೂಲಕ ದೇಶದ ರಾಜಕೀಯ ಹಾಗೂ ಸಂವಿಧಾನದ ವ್ಯವಸ್ಥೆಯನ್ನು ಸದೃಢಗೊಳಿಸುವ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ 24ನೆ ಘಟಿಕೋತ್ಸವದಲ್ಲಿ ಕಾನೂನು ವಿಭಾಗದಲ್ಲಿ ಸ್ವರ್ಣ ಪದಕ ವಿಜೇತರಿಗೆ ಪದಕ ವಿತರಣೆ ಮಾಡಿ ಮಾತನಾಡಿದ ಅವರು, ನಮ್ಮ ದೇಶದ ಸಂವಿಧಾನವನ್ನು ಸಿದ್ಧಪಡಿಸಿದ ವೇಳೆ ಹೀಯಾಳಿಸಿದ್ದ ಹಲವು ಪ್ರಬಲ ದೇಶಗಳೆ ಇಂದು ನಮ್ಮ ಸಂವಿಧಾನವನ್ನು ಅತ್ಯುತ್ತಮ ಸಂವಿಧಾನವೆಂದು ಹೊಗಳುತ್ತಿದ್ದಾರೆ. ಹಾಗಾಗಿ ನಮ್ಮ ಸಂವಿಧಾನವನ್ನು ಮತ್ತಷ್ಟು ಸದೃಢಗೊಳಿಸುವ ಜೊತೆಗೆ ದೇಶದ ಆಡಳಿತಗಾರರು ಮತ್ತು ನೀತಿರೂಪಕರಿಗೆ ವಿದ್ಯಾವಂತ ಯುವ ಸಮುದಾಯವು ಸ್ಪಂದಿಸಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
2014ನೆ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ಸರಕಾರವನ್ನು ಜನರು ಆಯ್ಕೆ ಮಾಡಿದರು. ಇದು ನಮ್ಮ ದೇಶದ ಮತದಾರರು ಎಷ್ಟು ಪ್ರಜ್ಞಾವಂತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರು ಮತದಾನ ಮಾಡುವುದು ಎಷ್ಟು ಮುಖ್ಯವೋ, ಅದೇ ರೀತಿ ದೇಶದ ಎಲ್ಲವಿಚಾರಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳಬೇಕು. ಆಗ ಮಾತ್ರ ನಮ್ಮ ದೇಶ ಸಮಗ್ರ ಅಭಿವೃದ್ಧಿ ಹೊಂದಲು ಸಾಧ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದಷ್ಟೇ ನಮ್ಮ ಕೆಲಸವಲ್ಲ ಎಂದರು.
ನಮ್ಮ ದೇಶದ ನ್ಯಾಯಾಂಗವು ತುಂಬಾ ಬಲಿಷ್ಠವಾಗಿದೆ. ಹಾಗಾಗಿಯೇ ಜನಸಾಮಾನ್ಯರು ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ವಿಶ್ವಾಸ ಹೊಂದಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿ ಅನ್ಯಾಯಕ್ಕೆ ಒಳಗಾದವರು ನ್ಯಾಯ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಬಹುದು. ನಿಜವಾಗಿಯೂ ಅವರು ಅನ್ಯಾಯಕ್ಕೆ ಒಳಗಾಗಿದ್ದರೆ ನ್ಯಾಯಾಲಯದಲ್ಲಿ ಅವರಿಗೆ ಖಂಡಿತವಾಗಿ ನ್ಯಾಯ ಸಿಕ್ಕೇ ಸಿಗುತ್ತದೆ.
ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯು ತುಂಬಾ ಶಕ್ತಿಶಾಲಿಯಾಗಿದ್ದು, ಅನ್ಯಾಯಕ್ಕೆ ಒಳಗಾದ ಯಾರೇ ಆದರೂ ದೂರು ಸಲ್ಲಿಸುವ ಮೂಲಕ ಕಾನೂನು ಹೋರಾಟ ಮಾಡಬಹುದು. ದುರ್ಬಲರು, ಅನ್ಯಾಯಕ್ಕೆ ಒಳಗಾದವರು, ಸಂತ್ರಸ್ಥರು ನ್ಯಾಯದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂಬುದನ್ನು ಸದಾ ಗಮನದಲ್ಲಿಟ್ಟುಕೊಳ್ಳವಂತೆ ರಾಷ್ಟ್ರಪತಿ ಅವರು ಕಾನೂನು ಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆಯು ಭಾರತ ದೇಶದಲ್ಲಿಯೇ ಅತ್ಯುತ್ತಮ ಶಾಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಪ್ರತಿಷ್ಟಿತ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವುದೆ ನಿಮ್ಮ ಭಾಗ್ಯ. ಅದರಲ್ಲೂ ಕಾನೂನು ಪದಯಲ್ಲಿ ಅತಿಹೆಚ್ಚು ಸ್ವರ್ಣ ಪದಕಗಳನ್ನು ವಿದ್ಯಾರ್ಥಿನಿಯರೇ ಪಡೆದಿರುವುದು ಹೆಮ್ಮೆಯ ವಿಷಯ. ಹುಡುಗರಿಗೆ ಪದಕ ಪಡೆಯಲು ಮೀಸಲಾತಿ ನೀಡಬೇಕೆನಿಸುತ್ತದೆ ಎಂದು ಪ್ರಣಬ್ ಮುಖರ್ಜಿ ಹಾಸ್ಯ ಚಟಾಕಿ ಹಾರಿಸಿದಾಗ ಸಭಾಂಗಣದಲ್ಲಿ ನಗುವಿನ ಅಲೆ ಎದ್ದಿತು. ಮಹಿಳೆಯರು ಈ ಕ್ಷೇತ್ರದಲ್ಲಿ ಅಲ್ಲದೆ ಎಲ್ಲ್ಲ ಕ್ಷೇತ್ರಗಳಲ್ಲೂ ಅತ್ಯುತ್ತಮ ಸಾಧನೆಯನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಬಾಯಿ ವಾಲಾ, ಸಿಎಂ ಸಿದ್ದರಾಮಯ್ಯ, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಸುಪ್ರಿಂಕೋರ್ಟ್‌ನ ನಿವೃತ್ತ ನಾ.ರಾಜೇಂದ್ರ ಬಾಬು ಉಪಸ್ಥಿತರಿದ್ದರು. ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿದರು. ರಾಷ್ಟ್ರೀಯ ಕಾನೂನು ಶಾಲೆಯ ಕುಲಪತಿ ಆರ್.ವೆಂಕಟ್ ರಾವ್ ಗಣ್ಯರನ್ನು ಸ್ವಾಗತಿಸಿದರು.