ಕಲಬುರ್ಗಿ ಹಂತಕರ ಬಂಧಿಸಲು ಸರಕಾರಕ್ಕೆ ಒಂದು ತಿಂಗಳ ಗಡುವು : ವಿಧಾನ ಮಂಡಲ ಮುತ್ತಿಗೆ ಎಚ್ಚರಿಕೆ

Update: 2016-08-30 17:35 GMT

ಬೆಂಗಳೂರು, ಆ. 30: ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಒಂದು ತಿಂಗಳ ಒಳಗೆ ಬಂಧಿಸಬೇಕೆಂದು ಸಾಹಿತಿ, ಕಲಾವಿದರು ಹಾಗೂ ಹೋರಾಟಗಾರರು ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ.
ಮಂಗಳವಾರ ಇಲ್ಲಿನ ಧಾರವಾಡದಲ್ಲಿ ಡಾ.ಕಲಬುರ್ಗಿ, ಪನ್ಸಾರೆ, ದಾಭೋಲ್ಕರ್ ಹತ್ಯಾ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ‘ಬಂದೂಕಿನೆದುರು ಜನಧ್ವನಿ- ರಾಷ್ಟ್ರೀಯ ಜನಜಾಗೃತಿ ಜಾಥಾ’ ನಡೆಸಲಾಯಿತು.
ಕಲಬುರ್ಗಿ ಹತ್ಯೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ನಡೆಸುತ್ತಿರುವ ಮಂದಗತಿಯ ತನಿಖೆಗೆ ಸಾಹಿತಿಗಳು ಹಾಗೂ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನವೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಜಾಥಾದಲ್ಲಿ ಪಾಲ್ಗೊಂಡಿದ್ದ ಕಸಾಪ ಮಾಜಿ ಅಧ್ಯಕ್ಷ, ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ ಮಾತನಾಡಿ, ಕಲಬುರ್ಗಿ, ಪನ್ಸಾರೆ ಹಾಗೂ ದಾಭೋಲ್ಕರ್ ಕ್ರಾಂತಿಯ ಸಂಕೇತವಾಗಿದ್ದರು. ಇಂದಿನ ಸಮಾವೇಶವು ಕೇವಲ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸೀಮಿತವಾಗಿಲ್ಲ. ನಮ್ಮ ನೋವವನ್ನು ವ್ಯಕ್ತಪಡಿಸುವ ವೇದಿಕೆ ಇದಾಗಿದೆ ಎಂದರು.
ರಾಜ್ಯ ಸರಕಾರ ಕಲಬುರ್ಗಿಯವರ ಹತ್ಯೆಗೆ ಕಾರಣಕರ್ತರಾದವನ್ನು ಶೀಘ್ರವೇ ಬಂಧಿಸಬೇಕು. ಕೋಮುವಾದಿ ಶಕ್ತಿಗಳು ತನಿಖೆಯ ಹಾದಿತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಸಿಎಂ ಸಿದ್ದರಾಮಯ್ಯ ಈ ಸಂಬಂಧ ಸ್ಪಷ್ಟಣೆ ನೀಡಬೇಕೆಂದು ಆಗ್ರಹಿಸಿದರು.
ಕೋಮುವಾದಕ್ಕೆ ರಾಜ್ಯದಲ್ಲಿನ ಲಿಂಗಾಯತ ವೀರಶೈವರು ಸಾಥ್ ನೀಡುತ್ತಿರುವುದು ದುರಾದೃಷ್ಟಕರ. ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲೆ ಕಲಬುರ್ಗಿ ಹತ್ಯೆ ನಡೆದಿದ್ದು, ರಾಜ್ಯ ಸರಕಾರ ತ್ವರಿತವಾಗಿ ಆರೋಪಿಗಳ ಬಂಧಿಸಬೇಕು ಎಂದು ಚಂಪಾ ಇದೇ ವೇಳೆ ಆಗ್ರಹಿಸಿದರು.
ಗೋವಿಂದ ಪನ್ಸಾರೆ ಅವರ ಸೊಸೆ ಮೇಘಾ ಪನ್ಸಾರೆ ಮಾತನಾಡಿ, ಆಡಳಿತ ವ್ಯವಸ್ಥೆಯ ಮೇಲೆ ಜನ ಸಾಮಾನ್ಯರು ವಿಶ್ವಾಸ ಕಳೆದುಕೊಳ್ಳುವ ಮೊದಲು ಕಲಬುರ್ಗಿ ಹತ್ಯೆ ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡಬೇಕು. ಮೂರು ಮಂದಿ ಹತ್ಯೆ ಪ್ರಕರಣದಲ್ಲಿ ಸರಕಾರಗಳ ಅಧೀನದಲ್ಲಿರುವ ಸಿಬಿಐ, ಸಿಐಡಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಸಂಶಯ ವ್ಯಕ್ತಪಡಿಸಿದರು.
 ನರೇಂದ್ರ ದಾಭೋಲ್ಕರ್ ಅವರ ಪುತ್ರಿ ಮುಕ್ತಾಯಕ್ಕ ದಾಭೋಲ್ಕರ್ ಮಾತನಾಡಿ, ಫ್ಯಾಶಿಸ್ಟ್ ಶಕ್ತಿಗಳು ಮತ್ತೊಬ್ಬರನ್ನು ಗೌರವಿಸುವ ನಮ್ಮ ಸಂಸ್ಕೃತಿಯನ್ನು ಮರೆತಿವೆ. ಕಲಬುರ್ಗಿಯವರನ್ನು ಅತ್ಯಂತ ಜನನಿಬಿಡ ಪ್ರದೇಶದಲ್ಲಿರುವ ಅವರ ನಿವಾಸದಲ್ಲೆ ಹತ್ಯೆಗೈದಿರುವುದು ನನ್ನನ್ನು ದಿಗ್ಬ್ರಮೆಗೊಳಿಸಿದೆ ಎಂದು ನುಡಿದರು.
ರಾಷ್ಟ್ರದ ಆಸ್ತಿಯಾಗಿರುವ ಇಂತಹ ವಿಚಾರವಾದಿಗಳ ರಕ್ಷಣೆ ಮಾಡುವಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸರಕಾರಗಳು ವಿಫಲವಾಗಿವೆ ಎಂದು ಮುಕ್ತಾಯಕ್ಕ ದಾಭೋಲ್ಕರ್ ಇದೇ ಸಂದರ್ಭದಲ್ಲಿ ಆರೋಪಿಸಿದರು. ಕಲಬುರ್ಗಿಯವರ ಪುತ್ರ ಶ್ರೀವಿಜಯ ಮಾತನಾಡಿ, ನಮ್ಮ ತಂದೆಯ ಹತ್ಯೆಯ ನಂತರ ಆಗಿರುವ ಗಾಯಗಳು ಇನ್ನೂ ಹಸಿಯಾಗಿವೆ.
ನಮ್ಮ ತಂದೆ ಸಮಾಜ ಹಾಗೂ ಮಾನವೀಯತೆಗಾಗಿ ದುಡಿಯುತ್ತಿದ್ದರು. ಸಾಮಾಜಿಕ ನ್ಯಾಯ ಹಾಗೂ ಆರೋಗ್ಯ ಪೂರ್ಣ ಸಮಾಜಕ್ಕಾಗಿ ಹೋರಾಡುತ್ತಿದ್ದರು. ಕಲಬುರ್ಗಿ ಹತ್ಯೆಗೈದವರು ರಾಷ್ಟ್ರ ವಿರೋಧಿಗಳು. ವಿಚಾರವಾದಿಗಳ ಹತ್ಯೆಗೈದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
ಸಮಾವೇಶದಲ್ಲಿ ಹಿರಿಯ ಲೇಖಕ ಅರವಿಂದ ಮಾಲಗತ್ತಿ, ಮರಾಠಿ ಲೇಖಕ ಕುಮಾರ್ ಖೇತ್ಕರ್, ಹಿರಿಯ ಪತ್ರಕರ್ತ ಸಿದ್ದಾರ್ಥ ವರದರಾಜನ್, ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಲೇಖಕಿ ಕೆ.ನೀಲಾ, ಆರ್ಥಿಕ ತಜ್ಞೆ ಜಯಾ ಮೆಹ್ತಾ, ಉತ್ತರ ಪ್ರದೇಶದ ಲೇಖಕ ಪ್ರಣವ್ ಶ್ರೀಕೃಷ್ಣ, ಡಾ.ರೆಹಮತ್ ತರೀಕೆರೆ, ಸಿದ್ದಲಿಂಗ ಪಟ್ಟಣ ಶೆಟ್ಟಿ, ನೂರ್ ಶ್ರೀಧರ್, ಸಿದ್ದನಗೌಡ ಪಾಟೀಲ್, ಬಸವರಾಜ ಸೂಳಿಬಾವಿ, ಆರ್.ಮಾನ್ಸಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.


ಕೋಮುವಾದಕ್ಕೆ ರಾಜ್ಯದಲ್ಲಿನ ಲಿಂಗಾಯತ ವೀರಶೈವರು ಸಾಥ್ ನೀಡುತ್ತಿರುವುದು ದುರಾದೃಷ್ಟಕರ. ವೈಚಾರಿಕ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲೆ ಕಲಬುರ್ಗಿ ಹತ್ಯೆ ನಡೆದಿದ್ದು, ಕೋಮುವಾದಿ ಶಕ್ತಿಗಳು ತನಿಖೆಯ ಹಾದಿತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆಂಬ ಆರೋಪಗಳು ಕೇಳಿಬರುತ್ತಿವೆ. ಸಿಎಂ ಸಿದ್ದರಾಮಯ್ಯ ಈ ಸಂಬಂಧ ಸ್ಪಷ್ಟಣೆ ನೀಡಬೇಕು.
-ಚಂಪಾ, ಹಿರಿಯ ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News