ಕಾವೇರಿ ನೀರು, ನಿಗಮ ಮಂಡಳಿ ಆಯ್ಕೆ ಸಹಿತ ವಿವಿಧ ವಿಷಯಗಳಿಗೆ ಸಂಬಂಧಿಸಿ ಚರ್ಚೆಗೆ ಕೆಪಿಸಿಸಿ ಸಭೆ
ಬೆಂಗಳೂರು, ಸೆ.8: ಮುಂಬರುವ (2018) ವಿಧಾನಸಭಾ ಚುನಾವಣೆ, ನಿಗಮ ಮಂಡಳಿಗಳ ಆಯ್ಕೆ, ತಾಲೂಕು, ಜಿಲ್ಲಾವಾರು ಪದಾಧಿಕಾರಿಗಳ ಆಯ್ಕೆ ಹಾಗೂ ಕಾವೇರಿ ನದಿ ನೀರು ವಿಷಯದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಹಾಗೂ ಈ ಕುರಿತಂತೆ ಮುಂದೆ ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಮಧ್ಯಾಹ್ನ ಮಹತ್ವದ ಸಭೆ ನಡೆಯುತ್ತಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್, ಸಚಿವ ದೇಶಪಾಂಡೆ, ಸಿ.ಎಂ.ಇಬ್ರಾಹೀಂ, ಎಂ.ಕೃಷ್ಣಪ್ಪಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದಾರೆ.
ಕಾವೇರಿ ವಿಷಯದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶುಕ್ರವಾರ ರಾಜ್ಯ ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಕೈಗೊಳ್ಳಬೇಕಾದ ಮುಂದಿನ ನಿರ್ಧರದ ಕುರಿತು ಸಭೆಯಲ್ಲಿ ಚರ್ಚೆ ಆಗುವ ಸಾಧ್ಯತೆಗಳಿವೆ.
ನಿಗಮ ಮಂಡಳಿಗಳ ಸಂಭಾವ್ಯ ಆಯ್ಕೆ ಪಟ್ಟಿಯನ್ನು ತಯಾರಿಸಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಸಮ್ಮತಿಯ ಮೇರೆಗೆ ಅಂತಿಮಗೊಳಿಸುವ ಸಾಧ್ಯತೆಗಳ ಕುರಿತು ಸಭೆಯಲ್ಲಿ ಚರ್ಚೆ ಆಗುತ್ತಿದೆ ಎಂದು ತಿಳಿದುಬಂದಿದೆ.