ಕಾವೇರಿ ವಿವಾದ: ಇಂದು ಕರ್ನಾಟಕದ ಮೇಲ್ಮನವಿ ಅರ್ಜಿ ವಿಚಾರಣೆ

Update: 2016-09-11 08:34 GMT

ಬೆಂಗಳೂರು, ಸೆ.11: ತಮಿಳುನಾಡಿಗೆ 13 ಟಿಎಂಸಿಯಷ್ಟು ಕಾವೇರಿ ನೀರನ್ನು ನೀಡಬೇಕೆಂದು ಸೆ.5 ರಂದು ನೀಡಿರುವ ಆದೇಶವನ್ನು ಮರು ಪರಿಶೀಲಿಸಬೇಕು ಎಂದು ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟಿನ ರಿಜಿಸ್ಟ್ರಾರ್ ರವಿವಾರ ಅಪರಾಹ್ನ ನಡೆಸಲಿದ್ದಾರೆ.

 ಪ್ರತಿದಿನ 15,000 ಕ್ಯೂಸೆಕ್‌ನಂತೆ 10 ದಿನಗಳ ಕಾಲ 13 ಟಿಎಂಸಿಯಷ್ಟು ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಿ ಎಂಬ ಸುಪ್ರೀಂಕೋರ್ಟ್ ಆದೇಶದಿಂದ ರಾಜ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸೆ.5 ರಂದು ನೀಡಿರುವ ಆದೇಶವನ್ನು ಮರು ಪರಿಶೀಲಿಸಬೇಕು. ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕಾವೇರಿ ಮೇಲುಸ್ತುವಾರಿ ಸಮಿತಿ ಹಾಗೂ ಸುಪ್ರೀಂಕೋರ್ಟ್‌ಗೆ ಕರ್ನಾಟಕ ಶನಿವಾರ ಅರ್ಜಿ ಸಲ್ಲಿಸಿತ್ತು.

ರಾಜ್ಯ ಸರಕಾರದ ಪರ ಪ್ರಮುಖ ವಕೀಲ ಮೋಹನ್ ಕಾತರಕಿ, ರಾಜ್ಯ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಹಾಗೂ ಪ್ರಕರಣದಲ್ಲಿನ ಅಡ್ವೋಕೇಟ್ ಆನ್ ರೆಕಾರ್ಡ್ ವಿ.ಎನ್. ರಘುಪತಿ ಶನಿವಾರ ರಾತ್ರಿ ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್ ಮನೆಗೆ ತೆರಳಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಪ್ರಕರಣದ ಗಂಭೀರತೆ ವಿವರಿಸಿ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News