ಬೆಂಗಳೂರಿನ ಹಲವೆಡೆ ಕರ್ಫ್ಯೂ: ಜನಜೀವನ ಅಸ್ತವ್ಯಸ್ತ
ಬೆಂಗಳೂರು, ಸೆ.13: ಕಾವೇರಿ ವಿವಾದ ಕುರಿತಂತೆ ಕರ್ನಾಟಕ ಸರಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಬೆಂಗಳೂರಿನಾದ್ಯಂತ ಅಹಿತಕರ ಘಟನೆಗಳು ನಡೆದಿದ್ದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವು ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಕರ್ಫ್ಯೂನಿಂದಾಗಿ ಬೆಂಗಳೂರಿನಲ್ಲಿ ಜನ ಜೀವನ ಬಹುತೇಕ ಅಸ್ತವ್ಯಸ್ತಗೊಂಡಿದೆ.
ಕರ್ಫ್ಯೂ ಆದೇಶದಿಂದಾಗಿ ಬೆಂಗಳೂರು ನಗರದಲ್ಲಿ ಜನಜೀವನ ಬಹುತೇಕ ಸ್ತಬ್ಧಗೊಂಡಿದೆ. ಬೆಂಗಳೂರು ನಗರದ ಮೈಸೂರು ರಸ್ತೆ, ಮಾಗಡಿ ರಸ್ತೆ, ವಿಜಯನಗರ, ರಾಜಗೋಪಾಲನಗರ, ಸುಂಕದಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಿಷೇಧಾಜ್ಞೆ ಮುಂದುವರಿಸಲಾಗಿದೆ. ನಗರದಲ್ಲಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದೆ. ಬೆಂಗಳೂರಿನಲ್ಲಿ ವಿಮಾನನಿಲ್ದಾಣಕ್ಕೆ ತೆರಳುವ 'ವಾಯುವಜ್ರ' ಬಸ್ ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ನಗರದಲ್ಲಿ ಇಂದು ಕೂಡಾ ಸಿನೆಮಾ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಪೀಣ್ಯ ಸೇರಿದಂತೆ ಹಲವು ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪೆನಿಗಳಿಗೆ ರಜೆ ಘೋಷಿಸಲಾಗಿದೆ. ಬಹುತೇಕ ರಸ್ತೆಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದು ಕರ್ಫ್ಯೂ ಬಗ್ಗೆ ಜನತೆಗೆ ಮಾಹಿತಿ ನೀಡುತ್ತಿದ್ದಾರೆ.
ಕರ್ಫ್ಯೂ ಜಾರಿಯಲ್ಲಿಲ್ಲದ ಪ್ರದೇಶಗಳಲ್ಲಿ ಕೂಡಾ ವಾಹನ ಸಂಚಾರ ವಿರಳವಾಗಿದೆ. ಬೆಂಗಳೂರಿನಾದ್ಯಂತ ಇಂದು ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದ್ದು, ವಿವಿಧ ಪ್ರದೇಶಗಳಿಗೆ ತೆರಳಬೇಕಾಗಿರುವ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಕಾವೇರಿ ವಿವಾದ ಕುರಿತಂತೆ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಮತ್ತು ರಾಜ್ಯದ ಪರಿಸ್ಥಿತಿಯನ್ನು ನಿಯಂತ್ರಿಸುವ ಕುರಿತಂತೆ ಚರ್ಚಿಸಲು ಇಂದು ಸಿಎಂ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದೆ.
ಕರ್ಫ್ಯೂ ಅಂದರೆ?
ಕರ್ಫ್ಯೂ ಪ್ರದೇಶಗಳಲ್ಲಿ ಜನ ರಸ್ತೆಯಲ್ಲಿ ಪೊಲೀಸರ ಕಣ್ಣಿಗೆ ಕಾಣುವಂತಿಲ್ಲ.
ಪೊಲೀಸರು ಕಂಡಲ್ಲಿ ಗುಂಡು ಹಾರಿಸುವ ಅಧಿಕಾರ ಹೊಂದಿರುತ್ತಾರೆ.
ಗುಂಡು ಹಾರಿಸಲು ಮೇಲಧಿಕಾರಿಯ ಆದೇಶ ಪಡೆಯುವ ಅಗತ್ಯವಿಲ್ಲ.
ವ್ಯಕ್ತಿ ಮೇಲೆ ಅನುಮಾನ ಬಂದಲ್ಲಿ ಗುಂಡು ಹಾರಿಸುವ ಅಧಿಕಾರವಿದೆ.
ಕರ್ಫ್ಯೂ ವೇಳೆ ಅರೆಸ್ಟ್ ಆದರೆ ಜಾಮೀನು ಸಿಗುವ ಸಾಧ್ಯತೆ ಕಡಿಮೆ.
16 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಬೆಂಗಳೂರಿನಾದ್ಯಂತ 144 ಸೆಕ್ಷನ್ ಜಾರಿಗೊಳಿಸಿದ್ದಾರೆ.
144 ಸೆಕ್ಷನ್ ಅಂದರೆ?
5ಕ್ಕಿಂತ ಹೆಚ್ಚು ಜನ ಒಂದೆಡೆ ಸೇರುವಂತಿಲ್ಲ
ಯಾವುದೇ ಮೆರವಣಿಗೆ ಮತ್ತು ಸಭೆ ನಡೆಸುವಂತಿಲ್ಲ
ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವಂತಿಲ್ಲ
ಪ್ರತಿಕೃತಿ ದಹನ ಮತ್ತು ಪ್ರತಿಭಟನೆ ಮಾಡುವಂತಿಲ್ಲ
ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುವಂತಿಲ್ಲ
ಸಾರ್ವಜನಿಕರು ಕಾನೂನು ಸುವ್ಯವಸ್ಥೆ ಕಾಪಾಡು ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕರ್ಫ್ಯೂ ಜಾರಿಗೊಳಿಸಿದೆ. ಜನರು ಪ್ರಚೋದನೆಗೆ ಒಳಗಾಗದೇ ಶಾಂತ ರೀತಿಯಲ್ಲಿ ಹೋರಾಟ ಮಾಡಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.