ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವೆ: ಬೋಲ್ಟ್

Update: 2016-09-14 18:33 GMT

ಜಮೈಕಾ, ಸೆ.14: ‘‘ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಹಾಗೂ 200 ಮೀ. ಓಟದಲ್ಲಿ ಭಾಗವಹಿಸುವ ಬಗ್ಗೆ ಮನಸ್ಸನ್ನು ಮುಕ್ತ ವಾಗಿಟ್ಟುಕೊಂಡಿರುವೆ. ವಿಶ್ವ ದಾಖಲೆಗಿಂತಲೂ ಪದಕವನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಗಮನ ನೀಡುವೆ’’ ಎಂದು ವಿಶ್ವದ ಓಟದ ರಾಜ ಖ್ಯಾತಿಯ ಉಸೇನ್ ಬೋಲ್ಟ್ ಹೇಳಿದ್ದಾರೆ.

ಜಮೈಕಾದ ಓಟಗಾರ ಬೋಲ್ಟ್ ಕಳೆದ ತಿಂಗಳು ರಿಯೋ ಒಲಿಂಪಿಕ್ಸ್‌ನಲ್ಲಿ ಒಲಿಂಪಿಕ್ಸ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದರು. ಸತತ ಮೂರನೆ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕದ ಬೇಟೆ ನಡೆಸಿದ ಬೋಲ್ಟ್ ವಿಶ್ವದ ಗಮನ ಸೆಳೆದಿದ್ದರು.

‘‘ನಾನು ಲಂಡನ್‌ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 100 ಮೀ. ಓಟದಲ್ಲಿ ಮಾತ್ರ ಸ್ಪರ್ಧಿಸಲು ಬಯಸಿರುವೆ. ಆದರೆ, ಈ ಕುರಿತು ನನ್ನ ಕೋಚ್ ಬಳಿ ಚರ್ಚೆ ನಡೆಸುವೆ. ಕೋಚ್ ಗ್ಲೆನ್ ಮಿಲ್ಸ್ ಎರಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದು ಬಯಸುತ್ತಿದ್ದಾರೆ. ಮುಂದಿನ ವರ್ಷ ಆರಂಭದಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರಕ್ಕೆ ಬರುವೆ’’ಎಂದು ಬೋಲ್ಟ್ ಹೇಳಿದ್ದಾರೆ.

 ಕಳೆದ ವರ್ಷ ಬೀಜಿಂಗ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 100 ಹಾಗೂ 200 ಮೀ.ಓಟದಲ್ಲಿ ಚಿನ್ನದ ಪದಕ ಜಯಿಸಿರುವ ಬೋಲ್ಟ್ 2017ರ ಆಗಸ್ಟ್5 ರಿಂದ 13ರ ತನಕ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವೈರ್ಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದರು.

2009ರಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೋಲ್ಟ್ 100 ಹಾಗೂ 200 ಮೀ. ಓಟವನ್ನು ವಿಶ್ವ ದಾಖಲೆಯ ವೇಗದಲ್ಲಿ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News