ಐರ್ಲ್ಯಾಂಡ್, ಇಂಗ್ಲೆಂಡ್ ವಿರುದ್ಧದ ಟ್ವೆಂಟಿ20 ಸರಣಿಗೆ ಪಾಕ್ ತಂಡದಿಂದ ಉಸಾಮ್ ಮಿರ್ಗೆ ಕೊಕ್, ಹಾರಿಸ್ ರವೂಫ್ ಸೇರ್ಪಡೆ

Update: 2024-05-02 16:11 GMT

ರಾವಲ್ಪಿಂಡಿ: ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ನಲ್ಲಿ ನಡೆಯಲಿರುವ ಟ್ವೆಂಟಿ20 ಸರಣಿಗೆ ಪಾಕಿಸ್ತಾನ ಕ್ರಿಕೆಟ್ ತಂಡದಿಂದ ಲೆಗ್ಸ್ಪಿನ್ನರ್ ಉಸಾಮ ಮಿರ್ರನ್ನು ಕೈಬಿಡಲಾಗಿದೆ ಮತ್ತು ವೇಗದ ಬೌಲರ್ ಹಾರಿಸ್ ರವೂಫ್ರನ್ನು ಮರುಸೇರ್ಪಡೆಗೊಳಿಸಲಾಗಿದೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಾಕಿಸ್ತಾನ ತಂಡವನ್ನು ಪ್ರಕಟಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಆಯ್ಕೆಗಾರರಾದ ಮುಹಮ್ಮದ್ ಯೂಸುಫ್, ಅಬ್ದುಲ್ ರಝಾಕ್ ಮತ್ತು ವಹಾಹ್ ರಿಯಾಝ್, ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಆಟಗಾರರು ನೀಡುವ ನಿರ್ವಹಣೆಯ ಆಧಾರದಲ್ಲಿ ಟಿ20 ವಿಶ್ವಕಪ್ಗೆ ತಂಡವನ್ನು ಆರಿಸಲಾಗುವುದು ಎಂದು ಘೋಷಿಸಿದರು.

ಐರ್ಲ್ಯಾಂಡ್ನಲ್ಲಿ ಮೂರು ಪಂದ್ಯಗಳ ಸರಣಿಯು ಮೇ 10ರಂದು ಆರಂಭಗೊಳ್ಳುವುದು. ಬಳಿಕ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳುವುದು. ಇಂಗ್ಲೆಂಡ್ ವಿರುದ್ಧದ ಸರಣಿಯು ಮೇ 22ರಂದು ಆರಂಭಗೊಳ್ಳುವುದು.

“ಮುಹಮ್ಮದ್ ರಿಝ್ವಾನ್, ಅಝಮ್ ಖಾನ್ ಮತ್ತು ಇರ್ಫಾನ್ ಖಾನ್ ನಿಯಾಝಿ ದೈಹಿಕ ಕ್ಷಮತೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆದರೆ, ಅವರ ದೈಹಿಕ ಕ್ಷಮತೆಯ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. ಅವರು ಮುಂದಿನ ಪಂದ್ಯಗಳಲ್ಲಿ ಆಡುತ್ತಾರೆ ಎನ್ನುವ ವಿಶ್ವಾಸ ನಮಗಿದೆ'' ಎಂದು ವಹಾಬ್ ಹೇಳಿದರು.

“ಹಾರಿಸ್ ರವೂಫ್ ದೈಹಿಕವಾಗಿ ಶಕ್ತರಾದರೆ ಮತ್ತು ಮುಂದಿನ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ನೀಡಿದರೆ ಅವರು ನಮ್ಮ ಮೊದಲ ಆಯ್ಕೆಯಾಗಲಿದ್ದಾರೆ. ಅವರು ಬೌಲಿಂಗ್ ಮಾಡಲು ಆರಂಭಿಸಿದ್ದಾರೆ. ಆದರೆ ಅವರ ನಿರ್ವಹಣೆ ನಿರೀಕ್ಷಿತ ಮಟ್ಟಕ್ಕೆ ಏರದಿದ್ದರೆ, ನಮ್ಮ ಆಯ್ಕೆ ಹಸನ್ ಅಲಿ'' ಎಂದು ಅವರು ತಿಳಿಸಿದರು.

ಪಾಕಿಸ್ತಾನ ಸೂಪರ್ ಲೀಗ್ನ ಆರಂಭಿಕ ಹಂತದಲ್ಲಿ ಹಾರಿಸ್ ದೈಹಿಕ ಕ್ಷಮತೆ ಕಳೆದುಕೊಂಡಿದ್ದರು. ಅವರು ಫೆಬ್ರವರಿ ಬಳಿಕ ಆಡಿಲ್ಲ.

ತಂಡ: ಬಾಬರ್ ಅಝಮ್ (ನಾಯಕ), ಮುಹಮ್ಮದ್ ರಿಝ್ವಾನ್, ಅಝಮ್ ಖಾನ್, ಸಯೀಮ್ ಅಯೂಬ್, ಫಖರ್ ಝಮಾನ್, ಇಫ್ತಿಕಾರ್ ಅಹ್ಮದ್, ಇರ್ಫಾನ್ ಖಾನ್ ನಿಯಾಝಿ, ಅಬ್ರಾರ್ ಅಹ್ಮದ್, ಹಸನ್ ಅಲಿ, ಹಾರಿಸ್ ರವೂಫ್, ಶಹೀನ್ ಶಾ ಅಫ್ರಿದಿ, ಮುಹಮ್ಮದ್ ಅಮಿರ್, ಇಮಾದ್ ವಾಸಿಮ್, ನಸೀಮ್ ಶಾ, ಶದಬ್ ಖಾನ್, ಉಸ್ಮಾನ್ ಖಾನ್, ಅಬ್ಬಾಸ್ ಅಫ್ರಿದಿ ಮತ್ತು ಆಘಾ ಅಲಿ ಸಲ್ಮಾನ್.

ಮೇ ತಿಂಗಳ ಕೊನೆಯಲ್ಲಿ ವಿಶ್ವಕಪ್ ತಂಡ ಘೋಷಣೆ?

ಕೆಲವು ಆಟಗಾರರ ದೈಹಿಕ ಕ್ಷಮತೆ ಮತ್ತು ನಿರ್ವಹಣೆ ಸಮಸ್ಯೆಗಳ ಹಿನ್ನೆಲೆಯಲ್ಲಿ, ತನ್ನ ವಿಶ್ವಕಪ್ ತಂಡದ ಘೋಷಣೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ಮೇ ತಿಂಗಳ ಉತ್ತರಾರ್ಧಕ್ಕೆ ಮುಂದೂಡಿದೆ ಎಂದು ಪಿಸಿಬಿಯ ಮೂಲವೊಂದು ತಿಳಿಸಿದೆ.

ಪಾಕಿಸ್ತಾನವು ತನ್ನ ವಿಶ್ವಕಪ್ ತಂಡವನ್ನು ಮೇ 23 ಅಥವಾ ಮೇ 24ರಂದು ಘೋಷಿಸುವುದು ಎಂದು ಮೂಲ ಹೇಳಿದೆ. ವಿಶ್ವಕಪ್ ತಾಂತ್ರಿಕ ಸಮಿತಿಯಿಂದ ಅನುಮತಿ ಕೇಳದೆ ತಂಡಗಳಿಗೆ ಬದಲಾವಣೆ ಮಾಡಲು ಮೇ 24 ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ವಿಧಿಸಿದ ಅಂತಿಮ ಗಡುವು ಆಗಿದೆ.

ಮುಹಮ್ಮದ್ ರಿಝ್ವಾನ್, ಅಝಮ್ ಖಾನ್, ಇರ್ಫಾನ್ ಖಾನ್ ನಿಯಾಝಿ ಮತ್ತು ಹಾರಿಸ್ ರವೂಫ್ ಗಾಯಗಳಿಂದ ಬಳಲುತ್ತಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಯ್ಕೆ ಸಮಿತಿಯ ಕಾರಣಕ್ಕೆ ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News