ಕಾವೇರಿ ನೀರು ನಿಲ್ಲಿಸಲು ಆಗ್ರಹಿಸಿ ‘ರೈಲು ಬಂದ್’ಗೆ ಮಿಶ್ರ ಪ್ರತಿಕ್ರಿಯೆ

Update: 2016-09-15 13:25 GMT

ಬೆಂಗಳೂರು, ಸೆ. 15: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ರಾಜ್ಯಾದ್ಯಂತ ‘ರೈಲು ಬಂದ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈಲು ಸಂಚಾರಕ್ಕೆ ಯಾವುದೇ ಅಡ್ಡಿಯಾಗಲಿಲ್ಲ.

ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ಕಂಟೋನ್ಮೆಂಟ್(ದಂಡ ಪ್ರದೇಶ), ಮಂಡ್ಯ, ಮೈಸೂರು, ಹುಬ್ಬಳ್ಳಿ ಸೇರಿದಂತೆ ಅಲ್ಲಲ್ಲಿ ರೈಲು ತಡೆ, ಪ್ರತಿಭಟನೆಗಳನ್ನು ನಡೆಸಿದರೂ, ಮುನ್ನಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೊ ಬಸ್ತ್ ಕಲ್ಪಿಸಿದ್ದರಿಂದ ರೈಲ್ವೆ ಪ್ರಯಾಣಿಕರಿಗೆ ಯಾವುದೇ ರೀತಿಯ ಅಡಚಣೆ ಆಗಲಿಲ್ಲ.

‘ರೈಲು ಬಂದ್’ ಮುನ್ಸೂಚನೆ ಹಿನ್ನೆಲೆಯಲ್ಲಿ ಕಾವೇರಿ ಕಣಿವೆ ಪ್ರದೇಶ ಸೇರಿದಂತೆ ರಾಜ್ಯದ ಎಲ್ಲ ರೈಲ್ವೆ ನಿಲ್ದಾಣಗಳಿಗೆ ಇಂಡೋ-ಟಿಬೆಟಿಯನ್ ಪಡೆ, ಕ್ಷಿಪ್ರ ಕಾರ್ಯಾ ಚರಣೆ ಪಡೆ, ಸಶಸ್ತ್ರ ಸೀಮಾಬಲ, ರೈಲ್ವೆ ಪೊಲೀಸ್ ಸಿಬ್ಬಂದಿ ಜತೆಗೆ ಭಾರೀ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಹೀಗಾಗಿ ಎಲ್ಲ ರೈಲುಗಳು ನಿಗದಿಯಂತೆ ಸಂಚರಿಸಿದವು.

ಬಂಧನ: ರೈಲು ತಡೆ ಮಾಡಲು ಬಂದ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದು, ಯಾವುದೇ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಎಚ್ಚರಿಕೆ ನೀಡಿದರು. ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಕೆಲ ನಿಲ್ದಾಣಗಳಿಗೆ ನುಗ್ಗಲು ಯತ್ನಿಸಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದು, ನಡೆಯಿತು.

ಬೆಂಗಳೂರು ನಗರದಲ್ಲಿ ರೈಲು ತಡೆ ಪ್ರತಿಭಟನೆಗೆ ಮುಂದಾದ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು, ಪ್ರವೀಣ್ ಶೆಟ್ಟಿ, ಗಿರೀಶ್ ಗೌಡ, ಧಾರವಾಡದಲ್ಲಿ ರೇವಣ್ಣ ಸಿದ್ದೇಶ್ವರ ಮಠದ ಶ್ರೀ ಬಸವರಾಜ ದೇವರು ಸ್ವಾಮಿ ಸೇರಿ ಹಲವು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಆ ಬಳಿಕ ಬಿಡುಗಡೆ ಮಾಡಿದ್ದಾರೆ.

ರೈಲುಗಳು ಖಾಲಿ: ಕಾವೇರಿ ಹೋರಾಟ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲುಗಳು ಸೇರಿದಂತೆ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಆಗಮಿಸಿದ ಬಹುತೇಕ ರೈಲುಗಳು ಖಾಲಿ ಖಾಲಿಯಾಗಿದ್ದವು.

ಈ ಮಧ್ಯೆ ರಾಮನಗರದಲ್ಲಿ ಪ್ರಕಾಶ್ ಎಂಬ ಯುವಕ ಕಾವೇರಿ ನೀರು ನಿಲ್ಲಿಸಲು ಆಗ್ರಹಿಸಿ ಮೊಬೈಲ್ ಟವರ್ ಏರಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಕೂಡಲೇ ಸ್ಥಳಕ್ಕೆ ಧಾವಿಸಿ ಪೊಲೀಸರನ್ನು ಆತನ ಮನವೋಲಿಸಿ ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News