ಮೋದಿ ಮಧ್ಯ ಪ್ರವೇಶಕ್ಕೆರಾಜ್ಯಬಿಜೆಪಿ ಪ್ರಾಮಾಣಿಕ ಪ್ರಯತ್ನ ಮಾಡಲಿ: ಗುಂಡೂರಾವ್
ಬೆಂಗಳೂರು, ಸೆ.15: ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿ ಬೊಬ್ಬೆ ಹಾಕುವ ರಾಜ್ಯದ ಬಿಜೆಪಿ ಮುಖಂಡರು ಪ್ರಧಾನಿ ನರೇಂದ್ರ ಮೋದಿಯ ಮಧ್ಯ ಪ್ರವೇಶಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.
ಗುರುವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವೇರಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಕ್ಕೆ ರಾಜ್ಯ ಬಿಜೆಪಿ ಮುಖಂಡರು ನಿರಾಕರಿಸುತ್ತಿರುವುದು ಹಲವು ಸಂಶಯಗಳಿಗೆ ಕಾರಣವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದರು.ಾಂಗ್ರೆಸ್ ಸರಕಾರ ಕಾವೇರಿ ಪ್ರಕರಣದಲ್ಲಿ ಪ್ರಧಾನಿ ಮೋದಿ ಮಧ್ಯ ಪ್ರವೇಶಿಸಬೇಕೆಂದ ತಕ್ಷಣ, ಬಿಜೆಪಿ ಮುಖಂಡರು ಕಾವೇರಿ ಪ್ರಕರಣದಲ್ಲಿ ಕೇಂದ್ರ ಸರಕಾರವನ್ನು ಎಳೆಯಬೇಡಿ ಎಂದು ಪ್ರತಿಕ್ರಿಯಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಮೇಲಿನ ಭಯದಿಂದಾಗಿ ರಾಜ್ಯ ಬಿಜೆಪಿ ಮುಖಂಡರು ಈ ರೀತಿ ಹೇಳುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ರಾಜ್ಯ ಸರಕಾರ ಮಹಾದಾಯಿ ಹಾಗೂ ಕಾವೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಐದು ಪತ್ರ ಬರೆಯಲಾಗಿದೆ. ಈ ಸಂಬಂಧ ಪ್ರಧಾನಿ ನರೇಂದ್ರ ಸೌಜನ್ಯಕ್ಕಾದರು ಪ್ರತಿಕ್ರಿಯೆ ನೀಡಬೇಕಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಯಾವುದೇ ಪ್ರತಿಕ್ರಿಯೆ ನೀಡದೆ ಹಲವು ಸಮಸ್ಯೆಗಳಿಗೆ ಕಾರಣರಾಗಿದ್ದಾರೆ ಎಂದು ಅವರು ಆರೋಪಿಸಿದರು.ಹಿಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ್, ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಕಾವೇರಿ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಎರಡು ರಾಜ್ಯಗಳಿಗೂ ಸರಿಹೊಂದುವ ರೀತಿಯಲ್ಲಿ ಸಂಧಾನ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಆದರೆ, ಪ್ರಧಾನಿ ಮಾತ್ರ ದಿವ್ಯ ವೌನ ತಾಳಿದ್ದಾರೆ. ಈ ವೌನದ ಮರ್ಮವನ್ನು ಬಹಿರಂಗಪಡಿಸಬೇಕು ಎಂದು ಅವರು ತಿಳಿಸಿದರು.
ಸೆ.19ಕ್ಕೆ ಮೇಲುಸ್ತುವಾರಿ ಸಮಿತಿ ಸಭೆ
ಕೇಂದ್ರ ಜಲಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದ ಕಾವೇರಿ ಮೇಲುಸ್ತುವಾರಿ ಸಮಿತಿ ಸೆ.19ರಂದು ಸಭೆ ಸೇರಲಿದೆ. ಈ ವೇಳೆ ಮೇಲುಸ್ತುವಾರಿ ಸಮಿತಿ ಯಾವುದೇ ನಿರ್ಧಾರಕ್ಕೆ ಬರುವ ಮೊದಲು ಸ್ವತಂತ್ರ ಪರಿಣತ ತಂಡವನ್ನು ಕಾವೇರಿ ಜಲಾನಯನ ಪ್ರದೇಶಕ್ಕೆ ಕಳುಹಿಸಬೇಕು. ಈ ತಂಡ ನೀಡುವ ವರದಿಯ ಮೇಲೆ ತೀರ್ಮಾನ ಕೈಗೊಳ್ಳಬೇಕು ಎಂದು ರಾಜ್ಯ ಸರಕಾರದಿಂದ ಒತ್ತಾಯಿಸಲಾಗುವುದು.
-ದಿನೇಶ್‌ಗುಂಡೂರಾವ್ ಕಾರ್ಯಾಧ್ಯಕ್ಷ, ಕೆಪಿಸಿಸಿ