ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯಕ್ರಮ: ಎಚ್.ಕೆ.ಪಾಟೀಲ್
ನರೇಗಾ ತಾಂತ್ರಿಕ ಸಮಾಲೋಚಕರ ಮೇಲಿನ ಹಲ್ಲೆ ಪ್ರಕರಣತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯಕ್ರಮ: ಎಚ್.ಕೆ.ಪಾಟೀಲ್
ಬೆಂಗಳೂರು, ಸೆ.15: ನಕಲಿ ಬಿಲ್ ಪಾವತಿಸಲು ಒಪ್ಪದ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಬಾಗೇನಹಳ್ಳಿ ಪಂಚಾಯತ್‌ನ ನರೇಗಾ ಯೋಜನೆಯ ತಾಂತ್ರಿಕ ಸಮಾಲೋಚಕ ಎಚ್.ಆರ್.ಶ್ರೀನಿವಾಸ್ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಆರ್.ಟಿ.ನಗರದಲ್ಲಿನ ಶ್ರೀನಿವಾಸ್ ಅವರ ಸಹೋದರಿ ನಿವಾಸದಲ್ಲಿ ಅವರನ್ನು ಭೇಟಿ ಮಾಡಿ ಸಹಾನುಭೂತಿ ವ್ಯಕ್ತಪಡಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.ಂಭೀರ ಸ್ವರೂಪದ ಗಾಯಗಳಿಂದ ತೊಂದರೆಗೊ ಳಗಾಗಿರುವ ಶ್ರೀನಿವಾಸ್ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಇಲಾಖೆಯಿಂದ ಭರಿಸಲಾಗುವುದು. ಪ್ರಾಮಾಣಿಕರನ್ನು ಉತ್ತೇಜಿಸುವ ಸದುದ್ದೇಶದಿಂದ ಗಾಂಧಿಜಯಂತಿ ದಿನದಂದು ನಮ್ಮ ಇಲಾಖೆ ವತಿಯಿಂದ ಜರಗುವ ಗಾಂಧಿ ಗ್ರಾಮ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.
ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಿಡಿದು ನಿಂತ ಇಂತಹ ನೌಕರರ ಬಗ್ಗೆ ತಮಗೆ ಅಪಾರವಾದ ಹೆಮ್ಮೆ ಉಂಟಾಗಿದೆ ಎಂದ ಅವರು, ಆದುದರಿಂದಲೆ, ಶ್ರೀನಿವಾಸ್‌ಗೆ ಪೊಲೀಸ್ ರಕ್ಷಣೆ ಒದಗಿಸುವ ಜೊತೆಗೆ ಯಾರು ಈ ಹಲ್ಲೆಗೆ ಕಾರಣರಾಗಿದ್ದಾರೋ ಅಂತಹ ಗುತ್ತಿಗೆದಾರ ವ್ಯಕ್ತಿಗಳು ಇಲಾಖೆಯಲ್ಲಿ ಎಲ್ಲಿಯೆ ಕೆಲಸ ಮಾಡಿದ್ದರೂ ಈ ತನಿಖೆ ಮುಗಿಯುವವರೆಗೂ ಅವರ ಬಿಲ್‌ಗಳನ್ನು ಪಾವತಿ ಮಾಡದೆ ಇರಲು ಸ್ಥಳದಲ್ಲೇ ಇದ್ದ ನರೇಗಾ ಆಯುಕ್ತರಿಗೆ ಸೂಚನೆ ನೀಡಿದರು.
ಶ್ರೀನಿವಾಸ್ ತೋರಿದ ಧೈರ್ಯ ಮತ್ತು ಸಾಹಸಗಳು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಕೊನೆಯ ಅಧಿಕಾರಿಯಿಂದ ಹಿಡಿದು ಹಿರಿಯ ಅಧಿಕಾರಿಯವರೆಗೆ ಮಾರ್ಗದರ್ಶಿ ಎಂದು ಎಚ್.ಕೆ.ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲಾಖೆಯ ನೌಕರರು ಶ್ರೀನಿವಾಸ್ ಅವರ ಮಾದರಿಯಲ್ಲೆ ಭ್ರಷ್ಟಾಚಾರದ ವಿರುದ್ಧ ದೃಢವಾದ ಹೆಜ್ಜೆಗಳನ್ನು ಇಡಬೇಕೆಂದು ಇದೇ ಸಂದರ್ಭದಲ್ಲಿ ಎಚ್.ಕೆ.ಪಾಟೀಲ್ ಕರೆ ನೀಡಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ಅವರ ತಾಯಿ ಕಾಳಮ್ಮ ಸೇರಿದಂತೆ ಕುಟುಂಬದ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.