ಸಿಆರ್‌ಎಫ್ ತಂಡದ ಪಾಸಿಂಗ್ ಔಟ್ ಪೆರೇಡ್‌ಗೆ ಕಾಶ್ಮೀರಿ ಜುನೈದ್ ಖಾನ್ ನೇತೃತ್ವ

Update: 2016-09-16 03:15 GMT

ಗುರ್ಗಾಂವ್, ಸೆ.16: ದೇಶದ ಅತಿದೊಡ್ಡ ಅರೆ ಮಿಲಿಟರಿ ಪಡೆ ಎನಿಸಿದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಯ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಯುವಕ ಗುಲ್ ಜುನೈದ್ ಖಾನ್ ನೇತೃತ್ವ ವಹಿಸಿ ಗಮನ ಸೆಳೆದರು.

ನೇರ ಪ್ರವೇಶ ಪಡೆದ ಅಧಿಕಾರಿಗಳಿಗೆ 48 ವಾರಗಳ ಕಠಿಣ ತರಬೇತಿ ನೀಡಿದ ಬಳಿಕ ಅವರನ್ನು ಸೇವೆಗೆ ನಿಯೋಜಿಸುವ ಮುನ್ನ ನಡೆಯುವ ಅಂತಿಮ ಹಂತದ ಪೆರೇಡ್‌ನಲ್ಲಿ 26 ವರ್ಷದ ಖಾನ್ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು.

ಯುಪಿಎಸ್‌ಸಿ ಆಯ್ಕೆ ಮಾಡುವ ಈ ಅಧಿಕಾರಿಗಳ 75 ಮಂದಿಯ ಇತ್ತೀಚಿನ ತಂಡಕ್ಕೆ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವುದು, ಕಾರ್ಯಾಚರಣೆಯ ನಾಯಕತ್ವ ಕೌಶಲ ಸೇರಿದಂತೆ ವಿವಿಧ ಕೌಶಲಗಳಲ್ಲಿ ತರಬೇತಿ ನೀಡಿದ ಬಳಿಕ ಎಡಪಂಥೀಯ ಉಗ್ರವಾದದಿಂದ ಕಂಗೆಟ್ಟಿರುವ ರಾಜ್ಯಗಳು ಸೇರಿದಂತೆ ದೇಶಾದ್ಯಂತ ನಿಯೋಜಿಸಲಾಗುತ್ತದೆ. ಖಾನ್ ಛತ್ತೀಸ್‌ಗಢಕ್ಕೆ ನಿಯೋಜನೆಗೊಂಡಿದ್ದಾರೆ.

 ಇಲ್ಲಿನ ಕಾದರ್‌ಪುರ ಸಿಆರ್‌ಪಿಎಫ್ ಅಧಿಕಾರಿಗಳ ತರಬೇತಿ ಅಕಾಡಮಿಯಲ್ಲಿ ಕಠಿಣ ತರಬೇತಿ ಪಡೆದ ಬಳಿಕ ನಡೆದ ಪಾಸಿಂಗ್ ಔಟ್ ಪೆರೇಡ್‌ನಲ್ಲಿ ಪೆರೇಡ್ ಕಮಾಂಡರ್ ಆಗಿ ಹೆಜ್ಜೆ ಹಾಕಿದರು. ಸಿಆರ್‌ಪಿಎಫ್ ಮಹಾನಿರ್ದೇಶಕ ಕೆ.ದುರ್ಗಾಪ್ರಸಾದ್ ವಂದನೆ ಸ್ವೀಕರಿಸಿದರು. ಸಾಂಪ್ರದಾಯಿಕ ಪೆರೇಡ್‌ನ ಬಳಿಕ ಈ ಯುವ ಅಧಿಕಾರಿಯ ಭುಜಕ್ಕೆ ಸಹಾಯಕ ಕಮಾಂಡೆಂಟ್ ಸ್ಟಾರ್ ತೊಡಿಸಿ ಗೌರವಿಸಿದರು.

"ಕಾಶ್ಮೀರದ ಗತವೈಭವ ಮರುಕಳಿಸುವ ನಿಟ್ಟಿನಲ್ಲಿ ಎಲ್ಲರೂ ಶಕ್ತಿಮೀರಿ ಶ್ರಮಿಸುವಂತೆ ನಮ್ಮ ರಾಜ್ಯದ ಯುವಕರಿಗೆ ಮನವಿ ಮಾಡುವುದಾಗಿ" ಅವರು ಈ ಸಂದರ್ಭದಲ್ಲಿ ಹೇಳಿದರು. ಖಾನ್ ಅವರ ತಂಡದ ಸಂದೀಪ್ ಶಕ್ತಿ ಅವರನ್ನು ಉತ್ತಮ ತರಬೇತಿ ಅಧಿಕಾರಿಯಾಗಿ ಘೋಷಿಸಲಾಯಿತು. ಇವರಿಗೆ ಸ್ವಾರ್ಡ್ ಆಫ್ ಆನರ್ ಹಾಗೂ ಗೃಹಸಚಿವರ ಕಪ್ ನೀಡಿ ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News