×
Ad

ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಹಮೀದಾ ಬಾನುಗೆ ಡೂಡಲ್ ಮೂಲಕ ಗೌರವ ಸಲ್ಲಿಸಿದ ಗೂಗಲ್‌

Update: 2024-05-04 18:00 IST

PC : Google Doodle website

ಹೊಸದಿಲ್ಲಿ: ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಎಂದೇ ಪರಿಗಣಿತರಾಗಿರುವ ಹಮೀದಾ ಬಾನು ಅವರ ಸ್ಮರಣಾರ್ಥ ಗೂಗಲ್‌ ಇಂದು, ಮೇ 4ರಂದು ಡೂಡಲ್‌ ಒಂದನ್ನು ಬಿಡುಗಡೆಗೊಳಿಸಿದೆ.

“ಹಮೀದಾ ಬಾನು ತಮ್ಮ ಕಾಲದ ಅದ್ಭುತ ಪ್ರತಿಭೆಯಾಗಿದ್ದರು, ಆಕೆ ಭಾರತ ಮತ್ತು ಜಗತ್ತಿನಾದ್ಯಂತ ತಮ್ಮ ನಿರ್ಭೀತ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಆಕೆಯ ಕ್ರೀಡಾ ಸಾಧನೆಯ ಹೊರತಾಗಿ ಆಕೆ ಸದಾ ತಮ್ಮ ನೇರ ನಡೆನುಡಿ, ವ್ಯಕ್ತಿತ್ವಕ್ಕೆ ಸದಾ ಸ್ಮರಣೀಯರಾಗಿದ್ದಾರೆ,” ಎಂದು ಡೂಡಲ್‌ ಜೊತೆಗೆ ಗೂಗಲ್‌ ವಿವರಣೆ ನೀಡಿದೆ.

1954ರಲ್ಲಿ ಇಂದಿನ ದಿನ ನಡೆದ ಕುಸ್ತಿ ಪಂದ್ಯದಲ್ಲಿ ಹಮೀದಾ ಬಾನು ಕೇವಲ 1 ನಿಮಿಷ 34 ಸೆಕೆಂಡ್‌ಗಳಲ್ಲಿ ಗೆಲುವು ಸಾಧಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದರು. ಈ ಸಂದರ್ಭ ಅವರು ಖ್ಯಾತ ಕುಸ್ತಿಪಟು ಬಾಬಾ ಪಹಲ್ವಾನ್‌ ಅವರನ್ನು ಸೋಲಿಸಿದ್ದರು. ಈ ಸ್ಪರ್ಧೆಯ ನಂತರ ಬಾಬಾ ಪಹಲ್ವಾನ್‌ ಕುಸ್ತಿ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದರು.

ಈ ಡೂಡಲ್‌ ಅನ್ನು ಬೆಂಗಳೂರು ಮೂಲದ ಕಲಾವಿದೆ ದಿವ್ಯಾ ನೇಗಿ ರಚಿಸಿದ್ದಾರೆ. ಹಿನ್ನೆಲೆಯಲ್ಲಿ ಗೂಗಲ್‌ ಬರೆದಿರುವುದು ಹಾಗೂ ಸುತ್ತಲು ಹೂಗಳನ್ನು ಬಿಡಿಸಲಾಗಿದೆ.

ಅಮೆಝಾನ್‌ ಆಫ್‌ ಆಲಿಘರ್‌ ಎಂದೇ ಪರಿಗಣಿತರಾಗಿದ್ದ ಹಮೀದಾ ಬಾನು ಉತ್ತರ ಪ್ರದೇಶದ ಆಲಿಘರ್‌ನಲ್ಲಿ ಜನಿಸಿದ್ದರು. ಅವರು 1940ರಿಂದ 1950ವರೆಗೆ 300ಕ್ಕೂ ಅಧಿಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರು.

ಅವರು ಪುರುಷ ಕುಸ್ತಿಪಟುಗಳಿಗೆ ಬಹಿರಂಗವಾಗಿ ಸವಾಲೊಡ್ಡುತ್ತಿದ್ದರು ಹಾಗೂ ತನ್ನನ್ನು ಸೋಲಿಸುವ ಮೊದಲ ವ್ಯಕ್ತಿಯನ್ನು ವಿವಾಹವಾಗುವುದಾಗಿ ಹೇಳುತ್ತಿದ್ದರು.

ಅವರು ರಷ್ಯಾದ ಕುಸ್ತಿಪಟು ವೇರಾ ಚಿಸ್ತಿಲಿನ್‌ ವಿರುದ್ಧ ಎರಡು ನಿಮಿಷಗಳಲ್ಲಿ ಜಯ ಗಳಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News