ಹಿಂಸಾಚಾರದಿಂದಲ್ಲ; ಮಾತುಕತೆಯಿಂದ ಮಾತ್ರ ಪರಿಹಾರ

Update: 2016-09-16 18:57 GMT

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನೀರಿನ ಹಂಚಿಕೆ ವಿಷಯವನ್ನು ಸಮರ್ಪಕವಾಗಿ ಬಗೆಹರಿಸುವ ನಿಟ್ಟಿನಲ್ಲಿ ಎರಡೂ ರಾಜ್ಯ ಸರಕಾರಗಳು ಹಾಗೂ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿವೆ. ಎರಡೂ ರಾಜ್ಯ ಸರಕಾರಗಳ ಹಾಗೂ ಕೇಂದ್ರ ಸರಕಾರದ ಈ ಹೊಣೆಗೇಡಿತನವನ್ನು ಧಾರವಾಡದ ಕಳಸಾ ಬಂಡೂರಿ ಮಹಾದಾಯಿ ಮಹಾ ಜನಾಂದೋಲನ ಸಮಿತಿ ಒಕ್ಕೊರಲಿನಿಂದ ಖಂಡಿಸುತ್ತದೆ.
ಈಗ ಭುಗಿಲೆದ್ದಿರುವ ಹಿಂಸಾಚಾರದಿಂದಾಗಿ ಲಕ್ಷಾಂತರ ಜನರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದು, ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಎರಡೂ ಸರಕಾರಗಳು ಕಟ್ಟುನಿಟ್ಟಿನ ಕಾನೂನು ಕ್ರಮ ಜರಗಿಸಿ ಹಿಂಸಾತ್ಮಕ ಕೃತ್ಯಗಳನ್ನು ತಡೆಗಟ್ಟಿ, ಪ್ರಜೆಗಳ ಸುರಕ್ಷತೆ ಹಾಗೂ ಅವರ ಆಸ್ತಿಪಾಸ್ತಿಗಳ ರಕ್ಷಣೆ ಮಾಡಿ ಶಾಂತಿ, ಸುವ್ಯವಸ್ಥೆ ಕಾಪಾಡಬೇಕಾಗಿದೆ.
ಕರ್ನಾಟಕ ಮತ್ತು ತಮಿಳುನಾಡು ಎರಡೂ ಕಡೆ, ಪರಸ್ಪರ ಇನ್ನೊಂದು ಭಾಷಿಕರ ಮೇಲೆ ಹಲ್ಲೆ ನಡೆಸುವುದು, ವಾಹನಗಳಿಗೆ ಬೆಂಕಿ ಹಚ್ಚುವ ಅತ್ಯಂತ ದುರದೃಷ್ಟಕರ ಘಟನೆಗಳು ನಡೆಯುತ್ತಿವೆ. ಎರಡೂ ರಾಜ್ಯಗಳ ಶಾಂತಿಪ್ರಿಯ ಪ್ರಜೆಗಳಾಗಲಿ ಅಥವಾ ನಿಜವಾಗಲೂ ಸಂಕಷ್ಟಕ್ಕೊಳಗಾಗಿರುವ ರೈತ ಸಮುದಾಯವಾಗಲಿ ಈ ಗಲಭೆಗಳಿಗೆ ಕಾರಣರಾಗಿಲ್ಲ; ಬದಲಿಗೆ ಎರಡೂ ಕಡೆ ಇರುವ ಕಿಡಿಗೇಡಿಗಳು, ಕೆಲ ಮತಿಗೆಟ್ಟ ರಾಜಕೀಯ ಗುಂಪುಗಳು, ದುರಭಿಮಾನಿಗಳು ಇಂತಹ ಕೃತ್ಯಗಳಿಗೆ ಕಾರಣರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಮತ್ತಷ್ಟು ಪ್ರಚೋದನೆ ಉಂಟು ಮಾಡುವ ಸುದ್ದಿ ಗಳನ್ನು ಹರಿಯಬಿಡುತ್ತಿರುವ ದೂರದರ್ಶನ ವಾಹಿನಿಗಳ ಹೊಣೆಗೇಡಿತನ ಖಂಡನಾರ್ಹ.
ದಶಕಗಳಿಂದ ಬಗೆಹರಿಯದೆ ದಿನೇದಿನೇ ಉಲ್ಭಣಗೊಳ್ಳುತ್ತಿರುವ ನೀರಿನ ಸಮಸ್ಯೆಗೆ ತಮಿಳುನಾಡಿನ ಅಥವಾ ಕರ್ನಾಟಕದ ರೈತರಾಗಲಿ ಅಥವಾ ಇತರ ನಾಗರಿಕರಾಗಲಿ ಕಾರಣರಲ್ಲ ಎಂಬುದು ಸುಸ್ಪಷ್ಟ. ರಾಜಕೀಯ ಪಕ್ಷಗಳು ಜನಹಿತಕ್ಕೋಸ್ಕರ ವರ್ತಿಸದೆ, ಕ್ಷುಲ್ಲಕ ರಾಜಕೀಯ ಲಾಭಕ್ಕೋಸ್ಕರ ಬೇಜವಾಬ್ದಾರಿತನದಿಂದ ವರ್ತಿಸುತ್ತಿವೆ. ನೀರಿನ ಹಂಚಿಕೆ ಸಮಸ್ಯೆಯನ್ನು ದಶಕಗಳಿಂದಲೂ ಜೀವಂತ ಉಳಿಸಿಕೊಂಡು ಕೇವಲ ತಂತಮ್ಮ ರಾಜಕೀಯ ದಾಳವನ್ನಾಗಿಸಿಕೊಂಡಿರುವ ಇಂದಿನ ದುಷ್ಟ ರಾಜಕೀಯ ವ್ಯವಸ್ಥೆಯೇ ಇದಕ್ಕೆಲ್ಲ ಕಾರಣ. ಗಲಭೆಗಳು ಮತ್ತು ಪರಸ್ಪರ ಹಿಂಸಾಚಾರದಿಂದ ನೀರಿನ ಹಂಚಿಕೆ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಬಹುದೇ ಹೊರತು ಎಳ್ಳಷ್ಟೂ ಬಗೆಹರಿಯುವುದಿಲ್ಲ ಎಂಬುದನ್ನು ಪ್ರಜೆಗಳು ಮನಗಾಣಬೇಕು. ಭಾರತ ಒಕ್ಕೂಟದಲ್ಲಿ ಅಂತಾರಾಜ್ಯ ವಿವಾದಗಳನ್ನು ಬಗೆಹರಿಸುವಲ್ಲಿ ಕೇಂದ್ರ ಸರಕಾರದ ಪಾತ್ರ ಬಹಳ ನಿರ್ಣಾಯಕವಾದುದು. ಆದರೆ ಕೇಂದ್ರ ಸರಕಾರ ನಿಷ್ಕ್ರಿಯವಾಗಿದ್ದು, ತನ್ನ ಸಾಂವಿಧಾನಿಕ ಜವಾಬ್ದಾರಿಯನ್ನು ನಿರ್ವಹಿಸದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳೆನಿಸಿಕೊಂಡಿರುವ ಸಂಸದರಿಗೂ ಅಷ್ಟೇ ಮಹತ್ವದ ಪಾತ್ರವಿದೆ. ಈ ಸಂಸದರು ಕೇವಲ ತಮ್ಮ ರಾಜ್ಯಗಳನ್ನೋ ಅಥವಾ ತಮ್ಮ ಕ್ಷೇತ್ರಗಳನ್ನಷ್ಟೇ ಪ್ರತಿನಿಧಿಸುವುದಿಲ್ಲ; ಅವರು ಈ ದೇಶದ ಒಕ್ಕೂಟ ವ್ಯವಸ್ಥೆಯ ಪ್ರತಿನಿಧಿಗಳೂ ಆಗಿದ್ದಾರೆ. ಆದ್ದರಿಂದ ತಂತಮ್ಮ ಸಂಸದರು ಹಾಗೂ ಶಾಸಕರು ಕಾರ್ಯಪ್ರವೃತ್ತರಾಗುವಂತೆ ಜನರು ಒತ್ತಾಯಿಸಬೇಕು. ಕೇಂದ್ರ ಸರಕಾರದ ಮಧ್ಯಸ್ಥಿಕೆಯಲ್ಲಿ ಎರಡೂ ರಾಜ್ಯ ಸರಕಾರಗಳು ಪರಸ್ಪರ ಮಾತುಕತೆಗೆ ಮುಂದಾಗುವಂತೆ ಆಗ್ರಹಿಸಬೇಕಾಗಿದೆ. ಕಾವೇರಿ ಕಣಿವೆಯ ಎಲ್ಲ ಜನಪ್ರತಿನಿಧಿಗಳು, ರೈತ ನಾಯಕರು ಮತ್ತು ತಜ್ಞರನ್ನೊಳಗೊಂಡ ನಿಯೋಗಗಳು ಪರಸ್ಪರರ ಸಮಸ್ಯೆಯನ್ನು ಸಂವೇದನಾಶೀಲರಾಗಿ ಅರ್ಥಮಾಡಿಕೊಂಡು, ಮಾತುಕತೆ ನಡೆಸುವ ಮೂಲಕ ಮಾತ್ರ ಸಮಸ್ಯೆಗೆ ಪರಿಹಾರ ಸಿಗಬಲ್ಲುದು.
ನಮ್ಮ ದೇಶದಲ್ಲಿ ಅಂತಾರಾಜ್ಯಗಳ ನಡುವೆ ನದಿ ನೀರು ಹಂಚಿಕೆಯ ವಿವಾದ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಮಾತ್ರ ಸೀಮಿತವಾಗಿಲ್ಲ. ದೇಶದಾದ್ಯಂತ ವಿವಿಧ ರಾಜ್ಯಗಳ ನಡುವೆ ಇದೇ ರೀತಿಯ ಹತ್ತಾರು ವಿವಾದಗಳಿವೆ. ಇಂಥ ಸಮಸ್ಯೆಗಳನ್ನು ಅಮೂಲಾಗ್ರವಾಗಿ ಬಗೆಹರಿಸಲು ಒಂದು ಸಮಗ್ರ ‘ರಾಷ್ಟ್ರೀಯ ಜಲನೀತಿ’ಯನ್ನು ರೂಪಿಸಬೇಕಾದ ಅಗತ್ಯವಿದೆ. ನಿರ್ದಿಷ್ಟವಾಗಿ ನೀರಿನ ಕೊರತೆಯಿರುವ ಸಮಯದಲ್ಲಿ ಸಂಕಷ್ಟ ಹಂಚಿಕೆಯ ಸೂತ್ರಗಳನ್ನು ರೂಪಿಸಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರದ ನೇತೃತ್ವದಲ್ಲಿ ಎಲ್ಲ ರಾಜ್ಯಗಳನ್ನು ಒಳಗೊಂಡ ಒಂದು ತಜ್ಞರ ಸಮಿತಿಯನ್ನು ರಚಿಸಿ, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕಾಗಿದೆ.

-ಬಸವರಾಜ ಸೂಳಿಭಾವಿ, ಶಂಕರ ಹಲಗತ್ತಿ, ನಾಗಪ್ಪಉಂಡಿ, ಕೆ. ಎಚ್. ಪಾಟೀಲ, ಬಸವರಾಜ ಮ್ಯಾಗೇರಿ
ಕಳಸಾ ಬಂಡೂರಿ ಮಹದಾಯಿ ಮಹಾ ಜನಾಂದೋಲನ ಸಮಿತಿ, ಧಾರವಾಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News