×
Ad

ಸಮುದಾಯಗಳ ಜಾಗೃತಿಗಾಗಿ ಜಯಂತಿಗಳ ಆಚರಣೆ

Update: 2016-09-18 00:31 IST

ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಸಿಎಂ ಸಿದ್ದರಾಮಯ್ಯಬೆಂಗಳೂರು, ಸೆ.17: ಎಲ್ಲ ಸಮುದಾಯಗಳ ಪ್ರೇರಣಾ ಶಕ್ತಿಯಾಗಿ ರುವ ವ್ಯಕ್ತಿಗಳ ಜಯಂತಿಗಳನ್ನು ಆಚರಿಸುತ್ತಿದ್ದು, ಇದು ರಾಜಕೀಯ ಲಾಭಕ್ಕಾಗಿ ಅಲ್ಲ. ಬದಲಿಗೆ ಆಯಾ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು ಸರಕಾರದ ಮುಖ್ಯ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಏರ್ಪಡಿಸಿದ್ದ ವಿಶ್ವಕರ್ಮ ಜಯಂತ್ಯುತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸೃಜನಶೀಲತೆ ಮತ್ತು ಕ್ರಿಯಾಶೀಲತೆಗೆ ವಿಶ್ವಕರ್ಮ ಸಮುದಾಯ ಹೆಸರಾಗಿದೆ. ಈ ಸಮುದಾಯದ ಕೌಶಲ್ಯಕ್ಕೆ ತಲೆದೂಗದವರಿಲ್ಲ ಎಂದು ಶ್ಲಾಘಿಸಿದರು.
ನಾಡಿನ ಜನತೆಗೆ ವಿಶ್ವಕರ್ಮ ಜಯಂತಿಯ ಶುಭಾಶಯಗಳು. ವಿಶ್ವಕರ್ಮ ಅಭಿವೃದ್ದಿ ಮಂಡಳಿ ರಚನೆ ಮತ್ತು ವಿಶ್ವಕರ್ಮ ಜಯಂತಿಯನ್ನು ಸರಕಾರವೇ ಆಚರಿಸಬೇಕೆಂಬ ಪ್ರಮುಖ ಬೇಡಿಕೆಗಳು ಈಡೇರಿವೆ ಎಂದ ಸಿದ್ದರಾಮಯ್ಯ, ಅಮರಶಿಲ್ಪಿ ಜಕಣಾಚಾರಿ ಶಾಶ್ವತವಾಗಿ ಇತಿಹಾಸದಲ್ಲಿ ಉಳಿದಿದ್ದಾರೆಂದು ಬಣ್ಣಿಸಿದರು.

ದೇಶದ ಯಾವುದೇ ಶಾಸನ, ಶಿಲ್ಪಕಲೆ ನೋಡಿದರೆ ಈ ಸಮುದಾಯ ನೆನಪಿಗೆ ಬರುತ್ತದೆ. ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಈ ಸಮುದಾಯ ಇನ್ನೂ ಮುಂದೆ ಬರಬೇಕು ಎಂದು ಆಶಯ ವ್ಯಕ್ತಪಡಿಸಿದ ಸಿದ್ದರಾಮಯ್ಯ, ವಿಶ್ವಕರ್ಮ ಜನಾಂಗ ವೃತ್ತಿಯೊಂದಿಗೆ ಶೈಕ್ಷಣಿಕವಾಗಿ ಮುಂದುವರಿಯಬೇಕು ಎಂದರು.ಲನಶೀಲತೆ ಇಲ್ಲದ ಸಮಾಜದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಬದಲಾವಣೆ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಚಲನಶೀಲತೆ ಬರಲಿ ಎಂಬ ಕಾರಣಕ್ಕಾಗಿ ಹೀಗೆ ಜಯಂತಿ ಆಚರಿಸಲಾಗುತ್ತಿದೆ ಎಂದ ಅವರು, ಎಲ್ಲ ಸಮುದಾಯಗಳಲ್ಲಿ ಚಲನಶೀಲತೆ ಬಂದಾಗ ಮಾತ್ರ ಸಮ ಸಮಾಜ ನಿರ್ಮಾಣ ಆಗಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರನ್ನು ಎಲ್ಲ ಸಮುದಾಯಗಳು ಭದ್ರವಾಗಿ ಹಿಡಿಯಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಲು ಸಾಧ್ಯ ಎಂದ ಸಿದ್ದರಾಮಯ್ಯ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಹಣಕಾಸು ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಯಾರಿಗೆ ಇತಿಹಾಸ ತಿಳಿದಿರುವುದೋ, ಅನುಭವದಿಂದ ಯಾರು ಪಾಠ ಕಲಿಯುತ್ತಾರೋ ಅವರಿಂದ ಮಾತ್ರ ಭವಿಷ್ಯ ರೂಪಿಸಲು ಸಾಧ್ಯ. ವಿಶ್ವಕರ್ಮ ಸಮುದಾಯ ಬೆಳೆಯಬೇಕೆಂಬ ಕಾರಣಕ್ಕೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಯಂತಿ ಆಚರಿಸಲಾಗುತ್ತಿದೆ ಎಂದರು.
ಹಾಸನ ಜಿಲ್ಲೆಯ ಬೇಲೂರು ಅಥವಾ ಹಳೇಬೀಡಿನಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಪ್ರತಿಮೆ ಸ್ಥಾಪಿಸಲು ಸ್ಥಳ ನೀಡಲು ವಿಶ್ವಕರ್ಮ ಮಹಾಸಭಾ ಮನವಿ ಮಾಡಿದ್ದು, ಈ ಸಂಬಂಧ ಪರಿಶೀಲಿಸಿ ಸ್ಥಳ ನೀಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಕೆ.ಬಿ.ಕೋಳಿವಾಡ, ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ, ವಿಶ್ವಕರ್ಮ ಮಠದ ಕಾಳಹಸ್ತೇಂದ್ರ ಸ್ವಾಮಿ, ನೀಲಕಂಠಾಚಾರ್ಯ ಸ್ವಾಮಿ, ಅಖಿಲ ಭಾರತ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹಾಜರಿದ್ದರು.

ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗಾಗಿ 300 ಕೋಟಿ ರೂ. ಬೇಕು. ಆದರೆ, ಇಲ್ಲಿಯವರೆಗೆ ಸರಕಾರ ನೀಡಿರುವುದು ಕೇವಲ 40 ಕೋಟಿ ರೂ. ಮಾತ್ರ. ಸಮುದಾಯದ ಜನರಿಂದ ನೆರವು ಕೋರಿ 50 ಸಾವಿರ ಅರ್ಜಿಗಳು ಸಲ್ಲಿಕೆಯಾಗಿದೆ. ಇದಕ್ಕಾಗಿ ಕನಿಷ್ಠ 150 ಕೋಟಿ ರೂ.ಯನ್ನಾದರೂ ಸರಕಾರ ತಕ್ಷಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತಿದ್ದೇವೆ.

ಕೆ.ಪಿ.ನಂಜುಂಡಿ, ವಿಶ್ವಕರ್ಮ ಮಹಾಸಭಾ ಕಾರ್ಯಾಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News