ಇನ್ಶೂರೆನ್ಸ್‌ಗಾಗಿ ಅಂಗಡಿಗೇ ಬೆಂಕಿಯಿಟ್ಟಮಾಲಕ..!
ಬೆಂಗಳೂರು, ಸೆ.17: ನಗರದ ಚಿಕ್ಕಪೇಟೆಯಲ್ಲಿರುವ ಇಲೆಕ್ಟ್ರಾನಿಕ್ಸ್ ಗೂಡ್ಸ್ ಮಳಿಗೆ ಯಲ್ಲಿ ಸಂಭವಿಸಿದ ಅಗ್ನಿ ಅವಘಡ ಪ್ರಕರಣ ಹೊಸ ತಿರುವು ಪಡೆದಿದ್ದು, ವಿಮೆಗಾಗಿ ತನ್ನ ಅಂಗಡಿಗೆ ಬೆಂಕಿಯಿಟ್ಟಿದ್ದ ಮಾಲಕನನ್ನು ಶನಿವಾರ ಇಲ್ಲಿನ ಚಿಕ್ಕಪೇಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಅಂಗಡಿ ಮಾಲಕನನ್ನು ಮಾಯಾ ಇಲೆಕ್ಟ್ರಿಕ್‌ನ ನರೇಂದ್ರ ಲಾಲ್ ಚೌಧರಿ ಎಂದು ಪೊಲೀಸರು ಗುರುತಿಸಿದ್ದಾರೆ.
ನಗರದ ಚಿಕ್ಕಪೇಟೆಯ ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಮಾಯಾ ಇಲೆಕ್ಟ್ರಿಕ್ ಅಂಗಡಿಗೆ ಶುಕ್ರವಾರ ಮುಂಜಾನೆ 4:30ರ ಸುಮಾರಿಗೆ ಏಕಾಏಕಿ ಬೆಂಕಿ ಬಿದ್ದು, ಓರ್ವ ವ್ಯಕ್ತಿ ಸ್ಥಳದಲ್ಲಿಯೇ ಸಜೀವ ದಹನವಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಚಿಕ್ಕಪೇಟೆ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ಹಿನ್ನಲೆ: ಅಂಗಡಿ ಮಾಲಕ ನರೇಂದ್ರ ಲಾಲ್ ಚೌಧರಿ ಹಾಗೂ ಆತನ ಸ್ನೇಹಿತರಾದ ಗಜೇಂದ್ರ ಮತ್ತು ಅರುಣ್‌ಕುಮಾರ್ ವಿಮೆ ಹಣದ ಆಸೆಗಾಗಿ ಅಂಗಡಿಗೆ ಶುಕ್ರವಾರ ಮುಂಜಾನೆ 4:30ರ ಸುಮಾರಿಗೆ ಕಟ್ಟಡದ ಮೊದಲನೆ ಹಂತದಲ್ಲಿದ್ದ ಯುಪಿಎಸ್‌ನ್ನು ಶಾರ್ಟ್ ಸರ್ಕ್ಯೂಟ್ ಆಗುವಂತೆ ಮಾಡಿ ಬೆಂಕಿ ಹಚ್ಚಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬೆಂಕಿ ಹೆಚ್ಚಾದ ಕಾರಣ ಹೊಗೆಯಲ್ಲಿಯೇ ಸಿಲುಕಿ ಟ್ಯಾಕ್ಸಿ ಚಾಲಕನಾಗಿದ್ದ ಮಂಡ್ಯ ಮೂಲದ ಗಜೇಂದ್ರ ಸ್ಥಳದಲ್ಲಿಯೇ ಮೃತಪಟ್ಟರೆ, ಅರುಣ್‌ಕುಮಾರ್‌ಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಪ್ರಕರಣ ಸಂಬಂಧ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕ್ಕಪೇಟೆ ಪೊಲೀಸರು ತನಿಖೆ ನಡೆಸಿದ್ದರು.
ಪ್ರಕರಣ ಸಂಬಂಧ ಆರೋಪಿ ವಿಮೆ ಆಸೆಗಾಗಿಯೇ ನರೇಂದ್ರ ಲಾಲ್ ಚೌಧರಿ ಅಂಗಡಿಗೆ ಬೆಂಕಿಯಿಟ್ಟಿರುವುದಾಗಿ ಒಪ್ಪಿಕೊಂಡಿದ್ದು, ಪ್ರಕರಣ ಸಂಬಂಧ ತನಿಖೆ ಮುಂದುವರಿಸಲಾಗಿದೆ ಎಂದು ಚಿಕ್ಕಪೇಟೆ ಠಾಣಾ ಪೊಲೀಸರು ಹೇಳಿದ್ದಾರೆ.