ದೇಶದ ಅಭಿವೃದ್ಧಿಗೆ ಆರ್ಥಿಕ ಶಿಸ್ತು ಅಗತ್ಯ: ಸಚಿವ ಸದಾನಂದಗೌಡ
ಬೆಂಗಳೂರು, ಸೆ.17: ದೇಶ ಸರ್ವತೋಮುಖವಾಗಿ ಅಭಿವೃದ್ಧಿ ಯಾಗಬೇಕಾದರೆ ಆರ್ಥಿಕ ಶಿಸ್ತು ಅಗತ್ಯವಿದ್ದು, ಇದನ್ನು ಸಾಧಿಸುವ ನಿಟ್ಟಿನಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಸದಾನಂದ ಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶನಿವಾರ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪೆನ್ಷನರ್ಸ್ ಕಮ್ಯೂನ್ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ 5ನೆ ತ್ರೈವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಆರ್ಥಿಕ ಶಿಸ್ತಿಗೆ ಮೊದಲ ಆದ್ಯತೆ ಕೊಟ್ಟಿದೆ ಎಂದು ತಿಳಿಸಿದರು.
ದೇಶದಲ್ಲಿ ಭ್ರಷ್ಟಾಚಾರವನ್ನು ತಡೆಯಬೇಕಾದರೆ ಆರ್ಥಿಕ ವ್ಯವಹಾರ ಪಾರದರ್ಶಕವಾಗಿ ನಡೆಯಬೇಕು. ಇದನ್ನು ಸಾಕಾರ ಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜನಧನ್ ಯೋಜನೆಯಡಿ ದೇಶದ ಎಲ್ಲ ಬಡವರಿಗೂ ಉಚಿತವಾಗಿ ಬ್ಯಾಂಕ್‌ಗಳಲ್ಲಿ ಖಾತೆಯನ್ನು ತೆರೆಯಲಾಯಿತು ಎಂದು ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.
ದೇಶದಲ್ಲಿ ನರೇಗ ಯೋಜನೆಯಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರಿಗೆ ನೇರವಾಗಿ ಅವರ ಖಾತೆಗೆ ಹಣ ಸಂದಾಯವಾಗುತ್ತಿದೆ. ಇದರಿಂದ ಕೆಳ ಹಂತದಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿಂದಿನ ದಿನಗಳಲ್ಲಿ ಕೇವಲ ಶ್ರೀಮಂತರಿಗಷ್ಟೆ ಬ್ಯಾಂಕ್‌ಗಳು ಸಾಲ ಕೊಡುತ್ತಿದ್ದವು. ಪ್ರಸ್ತುತ ದಿನಗಳಲ್ಲಿ ಬ್ಯಾಂಕ್‌ಗಳು ಸಹ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದು, ಎಲ್ಲ ತರಹದ ಜನತೆಗೆ ಸಾಲ ಕೊಡುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಶ್ಲಾಘಿಸಿದರು.