ರಾಜ್ಯದ ಹಿತ ಕಾಪಾಡಲು ಬದ್ಧ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಸೆ.20: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರಕಾರವು ಜನರ ಹಿತವನ್ನು ಕಾಪಾಡಲು ಬದ್ಧವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ರಾಜ್ಯದ ವಿರುದ್ಧ ತೀರ್ಪು ನೀಡುತ್ತಿದೆ. ನಮಗೆ ಕುಡಿಯಲು ನೀರಿಲ್ಲ. ಇಂತಹ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಸೆ.12ರಂದು ನೀಡಿದ್ದ ಆದೇಶಕ್ಕೆ ಗೌರವ ನೀಡಿ, 1.68 ಲಕ್ಷ ಕ್ಯೂಸೆಕ್ ನೀರು ನೀಡಿದ್ದೇವೆ ಎಂದರು.
ಕಾವೇರಿ ಮೇಲುಸ್ತುವಾರಿ ಸಮಿತಿಯು ಸೆ.21ರಿಂದ 30ರವರೆಗೆ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದೇವೆ. ಈಗ ಆರು ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿ ಎಂದು ಆದೇಶ ನೀಡಿದರೆ ಹೇಗೆ ಸಾಧ್ಯ ಎಂದು ಪರಮೇಶ್ವರ್ ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವಿಚಾರದಲ್ಲಿ ಹಿರಿಯ ಸಚಿವರೊಂದಿಗೆ ಚರ್ಚೆ ನಡೆಸಲಿದ್ದಾರೆ. ಅಲ್ಲದೆ, ಬುಧವಾರ ಸಚಿವ ಸಂಪುಟ ಸಭೆಯನ್ನು ಕರೆದಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಆದೇಶದ ಪ್ರತಿ ಪಡೆದು ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ಹೇಳಿದರು.