ಅತ್ಯಾಚಾರಿಗಳು ಹೆದ್ದಾರಿಯಲ್ಲಿ... ಪೊಲೀಸರು ಅಡುಗೆಮನೆಯಲ್ಲಿ!

Update: 2016-09-22 18:54 GMT

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ ವರದಿ ಮಾಡಿರುವ ಇತ್ತೀಚಿನ ಅಂಕಿಅಂಶಗಳಲ್ಲಿ ಹರ್ಯಾಣ ರಾಜ್ಯವು ವಿಶೇಷವಾಗಿ ಹೊರಹೊಮ್ಮುತ್ತದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡುವ ವಿಷಯದಲ್ಲಿ ಅದು ಉತ್ತರ ಪ್ರದೇಶದ ನಂತರ ಎರಡನೇ ಸ್ಥಾನವನ್ನು ಅಲಂಕರಿಸಿದೆ. ಜನಸಾಮಾನ್ಯರು ಅನ್ಯಾಯ ನಡೆದಾಗ ತಲುಪುವ ಕೊನೆಯ ಸ್ಥಳವೇ ಪೊಲೀಸ್ ಎಂಬುದು ಈ ಅಂಕಿಅಂಶಕ್ಕೆ ಅಷ್ಟೊಂದು ಪ್ರಾಮುಖ್ಯತೆ ನೀಡುತ್ತದೆ. ದೇಶದಲ್ಲೇ ಅತ್ಯಂತ ಕೆಟ್ಟ ಲಿಂಗ ಅನುಪಾತವನ್ನು ಹೊಂದಿರುವ ಹರ್ಯಾಣವು ಮಹಿಳೆಯರ ವಿರುದ್ಧದ ಮುಖ್ಯವಾಗಿ ಶಿಶುಭ್ರೂಣ ಹತ್ಯೆಯಿಂದ ಹಿಡಿದು ಸಾಮೂಹಿಕ ಅತ್ಯಾಚಾರ ಮತ್ತು ಮರ್ಯಾದಾ ಹತ್ಯೆಯವರೆಗೆ, ಎಲ್ಲಾ ರೀತಿಯ ಅಪರಾಧಗಳಿಗೂ ಕುಖ್ಯಾತಿ ಪಡೆದಿದೆ. ಅಲ್ಲಿ ಬೃಹತ್ ಮಟ್ಟದಲ್ಲಿ ಹಿಂಸಾಚಾರಗಳೂ ನಡೆದಿವೆ. ಇತ್ತೀಚೆಗೆ ವರದಿಯಾದಂತೆ ಪಾದಚಾರಿ ಮಹಿಳೆಯರನ್ನು ಸಾಮೂಹಿಕ ಅತ್ಯಾಚಾರ ನಡೆಸಲಾಗುತ್ತಿದ್ದು ಈ ಪರಿಸ್ಥಿತಿಯನ್ನು ನಿಭಾಯಿಸಲು ಕೊನೆಗೆ ಸೇನೆಯನ್ನೇ ಕರೆಸಿಕೊಳ್ಳಬೇಕಾದ ಸ್ಥಿತಿ ಉದ್ಭವವಾಗಿತ್ತು. ಆದರೆ ಸರಕಾರ ಮಾತ್ರ ನಡೆಯುತ್ತಿರುವ ಅನಾಚಾರ ಮತ್ತು ಅನ್ಯಾಯದ ಬದಲಾಗಿ ಇನ್ಯಾವುದೋ ಬೇರೆಯದೇ ವಿಷಯದ ಬಗ್ಗೆ ತಲೆಕೆಡಿಸಿಕೊಂಡಂತ್ತಿತ್ತು. ಅದು ಗೋವುಗಳನ್ನು ರಕ್ಷಿಸುವ ಬಗ್ಗೆ ಅತ್ಯಂತ ಮುತುವರ್ಜಿವಹಿಸಿತ್ತು. ಆಡಳಿತದ ಚುಕ್ಕಾಣಿ ಹಿಡಿದ ಕೂಡಲೇ ರಾಜ್ಯ ಸರಕಾರ ಮಾಡಿದ ಮೊದಲ ಕೆಲಸವೆಂದರೆ ಹರ್ಯಾಣ ಗೋ ಸೇವಾ ಆಯೋಗವನ್ನು ರಚಿಸಿದ್ದು. ಪೊಲೀಸ್ ಇಲಾಖೆಯಲ್ಲೇ ವಿಶೇಷ ಗೋರಕ್ಷಣಾ ಕಾರ್ಯಪಡೆಯನ್ನು (ಸಿಪಿಟಿಎಫ್) ರಚಿಸಿ ಕಡ್ಡಾಯ ಗೋಹತ್ಯಾ ಮತ್ತು ಸೇವನೆಯನ್ನು ತಡೆಯುವ ಕಾರ್ಯವನ್ನು ನೀಡುವ ಮೂಲಕ ಈ ಆಯೋಗಕ್ಕೆ ಹೆಚ್ಚಿನ ಬಲವನ್ನು ನೀಡಲಾಯಿತು. ಇಲ್ಲಿ ಗಮನಿಸಬೇಕಾದ ಒಂದು ವಿಷಯವೆಂದರೆ ಕೇವಲ ದನದ ಮಾಂಸವಷ್ಟೇ ನಿಷೇಧ ಹೇರಲು ಅರ್ಹವಾಗಿದೆ. ಆಯೋಗ ಮತ್ತು ಸಿಪಿಟಿಎಫ್ ತಮ್ಮ ಕಾರ್ಯವನ್ನು ಗಂಭೀರವಾಗಿ ಪರಿಗಣಿಸಿವೆ. ಎಲ್ಲಿಯವರೆಗೆ ಎಂದರೆ ಬೀಫ್ ನಿಷೇಧ ಅನುಷ್ಠಾನಕ್ಕೆ ತರುವ ಸಲುವಾಗಿ ಇವರು ಮೇವತ್‌ನಲ್ಲಿರುವ ಹೊಟೇಲ್‌ಗಳಲ್ಲಿ ತಯಾರಿಸುವ ಬಿರಿಯಾನಿಯ ಮಾದರಿಗಳನ್ನು ಪರೀಕ್ಷಿಸುವ ನಿರ್ಧಾರವನ್ನು ಆಯೋಗ ತೆಗೆದುಕೊಳ್ಳುವವರೆಗೆ. ವರದಿಗಳ ಪ್ರಕಾರ ಪೊಲೀಸರು ಖಾಸಗಿ ನಿವಾಸಗಳಲ್ಲೂ ಮುಂದೆ ಇದೇ ರೀತಿಯ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಯೋಚಿಸುತ್ತಿದ್ದಾರೆ. ಪಶುಸಂಗೋಪನಾ ಇಲಾಖೆಯ ಓರ್ವ ಹಿರಿಯ ಅಧಿಕಾರಿ ಹೇಳುವಂತೆ ‘‘ದೂರುಗಳನ್ನು ತೆಗೆದುಕೊಳ್ಳಬೇಕಾದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಕಡೆಗಳಲ್ಲಿ ದಾಳಿ ನಡೆಸಬೇಕಿದೆ.’’ ಈ ದೂರುಗಳು ಹೇಗಿರಬಹುದು? ಅದನ್ನು ಮಾಡುವವರು ಯಾರು? ಅವರು ಖಂಡಿತವಾಗಿಯೂ ಸಾಮಾನ್ಯ ನಾಗರಿಕರಾಗಿರುತ್ತಾರೆ. ಇಲ್ಲೊಂದು ಪ್ರಶ್ನೆಯಿದೆ: ಒಬ್ಬ ಸಾಮಾನ್ಯ ನಾಗರಿಕ ನೀಡಿದ ದೂರಿನ ಆಧಾರದಲ್ಲಿ ಇನ್ನೋರ್ವ ಸಾಮಾನ್ಯ ನಾಗರಿಕನ ಮನೆಯ ಅಡುಗೆಮನೆಯನ್ನು ಹೊಕ್ಕುವ ಅಧಿಕಾರವನ್ನು ಪೊಲೀಸರಿಗೆ ಭಾರತೀಯ ದಂಡಸಂಹಿತೆಯ ಯಾವ ಸೆಕ್ಷನ್ ಅನುಮತಿ ನೀಡುತ್ತದೆ? ಇನ್ನು, ಇಂತಹ ದೂರನ್ನು ಒಬ್ಬ ತನ್ನ ವೈಯಕ್ತಿಕ ದ್ವೆೇಷವನ್ನು ಸಾಧಿಸಲು ಯಾಕೆ ಮಾಡಬಾರದು? ಇಂತಹ ಘಟನೆಗಳು ನಮ್ಮ ದೇಶದಲ್ಲಿ ಮತ್ತು ಈ ದೇಶದಲ್ಲಿರುವ ಹರ್ಯಾಣದಲ್ಲಿ ಸಾಮಾನ್ಯ ವಲ್ಲವೇ? ಒಂದು ವೇಳೆ ದೂರು ಸುಳ್ಳಾದರೆ? ಆಗ ಆ ಕುಟುಂಬವು ಗೋಮಾಂಸ ಸಂಶಯಿತರು ಎಂಬ ಪಟ್ಟಿಗೆ ಸೇರಿ ಮುಂದೆ ಜೀವನವಿಡೀ ಗೋರಕ್ಷಕರಿಂದ ಹಿಂಸೆಗೊಳಗಾಗುವ ಸೂಕ್ಷ್ಮ ಪರಿಸ್ಥಿತಿಗೆ ಒಳಗಾಗುತ್ತಾರೆ. ಸಿಪಿಟಿಎಫ್ ಮತ್ತು ಆಯೋಗ ಗೋವನ್ನು ರಕ್ಷಿಸಲು ಬಯಸುತ್ತವೆ. ಆದರೆ ಸಂತ್ರಸ್ತರನ್ನು ರಕ್ಷಿಸುವವರು ಯಾರು?. ಇದಕ್ಕೆ ಉತ್ತರಗಳು ಇಡೀ ರಾಜ್ಯಕ್ಕೆ ವ್ಯಾಪಿಸಿದ ಈ ದಾಳಿಗಳ ರಾಜಕೀಯ ಭೌಗೋಳಿಕ ಅಂಶದ ಮೇಲೆ ಅವಲಂಬಿತವಾಗಿದೆ. ಈ ದಾಳಿಗಳು ನುಹ್ ಎಂಬ ಜಿಲ್ಲೆಯನ್ನು ಗುರಿಯಾಗಿಸಿದೆ, ಇಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಸಮುದಾಯ ಸ್ವಲ್ಪಹೆಚ್ಚಿನ ಸಂಖ್ಯೆಯಲ್ಲಿದೆ. ಇನ್ನೂ ಹೆಚ್ಚೆಂಬಂತೆ ಈ ದಾಳಿಗಳನ್ನು ಈದ್ ಅಲ್ ಅಝ್‌ಹ (ಮುಸ್ಲಿಮರು ಪ್ರಾಣಿಬಲಿ ನೀಡುವ ಹಬ್ಬ) ಸಮಯದಲ್ಲೇ ನಡೆಸಲಾಗಿದ್ದು ಇದರಿಂದಾಗಿ ಮತ್ತಷ್ಟು ಸಂಶಯ ಮೂಡುತ್ತದೆ ಮತ್ತು ಇದು ಸಮುದಾಯಗಳನ್ನು ಧ್ರುವೀಕರಣಗೊಳಿಸುವ ಮತ್ತು ಆಮೂಲಕ ಮತೀಯ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡುವ ಪ್ರಯತ್ನ ಎಂಬುದರತ್ತ ಬೊಟ್ಟು ಮಾಡುತ್ತದೆ. ಇಂತಹ ಪ್ರಯತ್ನಗಳು ಹರ್ಯಾಣದಲ್ಲಿ ಹೊಸತೇನೂ ಅಲ್ಲ. ಕಳೆದೊಂದು ವರ್ಷದಿಂದ ಗೋರಕ್ಷಕರು ಅದಕ್ಕೆ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಆದರೆ ಈ ಬಾರಿ ಗೋರಕ್ಷಕರ ಬದಲಾಗಿ ರಾಜ್ಯ ಸರಕಾರವೇ ನಿಯೋಜಿಸಿದ ಆಯೋಗವು ಈ ಕೆಲಸವನ್ನು ಮಾಡುತ್ತಿದೆ. ಬಹುಮುಖ್ಯವಾಗಿ ಭಾರತದ ಜಾತ್ಯತೀತ ಸಂವಿಧಾನವನ್ನು ಎತ್ತಿಹಿಡಿಯುವ ಮತ್ತು ಯಾವುದೇ ಸಮುದಾಯದ ಧಾರ್ಮಿಕ ಆಚರಣೆಗೆ ಧಕ್ಕೆ ಮಾಡದಿರುವ ಪ್ರತಿಜ್ಞೆಯನ್ನು ಮಾಡುವ ಪೊಲೀಸ್ ಇಲಾಖೆಯಿಂದಲೇ ಸರಕಾರ ಈ ಕೆಲಸವನ್ನು ಮಾಡಿಸುತ್ತಿದೆ. ಇದು ಯಾರಿಗೂ ಶುಭಶಕುನವಲ್ಲ; ತನ್ನದೇ ಸರಕಾರದಿಂದ ಶೋಷಿಸಲ್ಪಡುತ್ತಿರುವ ನಾಗರಿಕರಿಗಾಗಲೀ ಅಥವಾ ಭಾರತದಲ್ಲಿ ಅಪರಾಧ ದೂರುಗಳಲ್ಲಿ ಎರಡನೇ ಸ್ಥಾನದಲ್ಲಿರುವ ಹರ್ಯಾಣ ರಾಜ್ಯಕ್ಕಾಗಲೀ. ಗೋಸಂರಕ್ಷಕರ ಅಟ್ಟಹಾಸವನ್ನು ಮತ್ತು ಕಾನೂನು ಉಲ್ಲಂಘಿಸುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂಬುದನ್ನು ರಾಜ್ಯ ಸರಕಾರ ತೋರಿಸಿಕೊಟ್ಟಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನದೇ ರಾಜಕೀಯ ಪಕ್ಷದಿಂದ ನಡೆಸಲ್ಪಡುತ್ತಿರುವ ಹರ್ಯಾಣ ರಾಜ್ಯ ಸರಕಾರವನ್ನು ಹತೋಟಿಗೆ ತರಲು ಇದು ಸಕಾಲವಾಗಿದೆ. ವೆದಿಯವರೇ ಒಮ್ಮೆ ಹೇಳಿದಂತೆ ಶೇ.80 ಗೋರಕ್ಷಕರು ಹಗಲಲ್ಲಿ ಗೋರಕ್ಷಕರು ಮತ್ತು ರಾತ್ರಿ ಸಮಯ ಅಪರಾಧಿಗಳಾಗಿರುತ್ತಾರೆ. ವಾಸ್ತವದ ಬಗ್ಗೆ ಅವರಿಗಿರುವ ಅರಿವು ರಾಜ್ಯ ಸರಕಾರದ ಕಾರ್ಯಗಳನ್ನು ತಡೆಯುವಲ್ಲಿ ಸಹಾಯ ಮಾಡಬಹುದು. ಸ್ವತಂತ್ರವಾಗಿ, ಭಾರತದ ಸರ್ವೋಚ್ಚ ನ್ಯಾಯಾಲಯವು ಕಾನೂನಿನ ಮೇಲ್ವಿಚಾರಕನಾಗಿರುವ ಕಾರಣ ಈ ದಾಳಿಗಳನ್ನು ಕಾನೂನಿನ ಪರಿಧಿಯಡಿ ನೋಡುವ ಅಗತ್ಯವಿದೆ.
ಕೃಪೆ: countercurrents.org

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News