ನಾಲ್ವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
ಬೆಂಗಳೂರು, ಸೆ.24: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ(ಕೆಎಸ್‌ಓಯು)ದಲ್ಲಿ ಕಂಪ್ಯೂಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಹಿಂದಿನ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಹಾಗೂ ಇತರೆ ನಾಲ್ವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಪ್ರೊ.ಎಂ.ಜಿ.ಕೃಷ್ಣನ್, ಪ್ರೊ.ಪಿ.ಎಸ್.ನಾಯಕ್, ಅಧ್ಯಯನ ಕೇಂದ್ರದ ಡೀನ್ ಪ್ರೊ.ಟಿ.ಡಿ.ದೇವೇಗೌಡ ಮತ್ತು ಉಪ ಕುಲಸಚಿವ ಡಾ.ರಾಮನಾಥಂ ನಾಯ್ಡು ಮತ್ತು ಪ್ರೊ.ಬಿ.ಎಸ್.ವಿಶ್ವನಾಥ್ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಹಾಗೂ ನಡೆಸುತ್ತಿದ್ದ ತನಿಖೆಗೆ ತಡೆಯಾಜ್ಞೆ ನೀಡಿತು.ಜೊತೆಗೆ, ಪೊಲೀಸರು ಹಾಗೂ ಪ್ರಕರಣದ ದೂರುದಾರರಾದ ಡಾ.ಎ.ಖಾದರ್ ಪಾಷಾ ಅವರಿಗೆ ನೋಟಿಸ್ ನೀಡಿತು.
ಪ್ರೊ.ಕೆ.ಎಸ್.ರಂಗಪ್ಪ ಅವರು ಕೆಎಸ್‌ಓಯು ಕುಲಪತಿಗಳಾಗಿದ್ದಾಗ 2012-13 ಹಾಗೂ 2013-14ನೆ ಸಾಲಿನಲ್ಲಿ ಕಂಪ್ಯೂಟರ್ ಹಾಗೂ ಇತರೆ ಉಪಕರಣಗಳನ್ನು ಖರೀದಿಸಿದ್ದರು. ಆದರೆ, ಈ ಖರೀದಿಯಲ್ಲಿ ಕರ್ನಾಟಕ ಪಾರದರ್ಶಕ ಕಾಯ್ದೆಯ ಉಲ್ಲಂಘನೆಯಾಗಿದೆ. ಖರೀದಿಗಾಗಿ ಮುಂಬೈ ಮೂಲದ ಕಂಪೆನಿಯೊಂದಿಗೆ ಅಕ್ರಮ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಆರೋಪ ಬಂದಿತ್ತು. ಆ ನಂತರ ನಡೆಸಿದ ತನಿಖೆಯಲ್ಲಿ ಸುಮಾರು 54 ಲಕ್ಷ ರೂ. ಮೊತ್ತದ ಅಕ್ರಮಗಳು ನಡೆದಿವೆ ಎಂದು ಬಹಿರಂಗವಾಗಿತ್ತು. ಈ ವರದಿ ಆಧರಿಸಿ ರಾಜ್ಯಪಾಲರು ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು. ವಿವಿಯ ಹಣಕಾಸು ಅಧಿಕಾರಿ ಡಾ.ಎ.ಖಾದರ್ ಪಾಷಾ ಅವರು ಪ್ರೊ.ಕೆ.ಎಸ್.ರಂಗಪ್ಪ, ಪ್ರೊ.ಎಂ.ಜಿ.ಕೃಷ್ಣನ್, ಟಿ.ಡಿ.ದೇವೇಗೌಡ, ಪ್ರೊ.ಬಿ.ವಿಶ್ವನಾಥ್, ಡಾ.ಕಮಲೇಶ್ ಮತ್ತು ಪಿ.ಎಸ್.ನಾಯಕ್ ಅವರ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣದ ಸಂಬಂಧ ಮೈಸೂರಿನ ಜಯಲಕ್ಷ್ಮೀಪುರಂ ಠಾಣಾ ಪೊಲೀಸರು 2016ರ ಅ.20ರಂದು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದರು.